ಬಳೂರಗಿ ತಾಂಡದಲ್ಲಿ ಧರೆಗೆ ಉರುಳಿದ 3 ಸಾವಿರಕ್ಕೂ ಹೆಚ್ಚು ಬಾಳೆ ಗಿಡಗಳು
ಅಫಜಲಪುರ: ತಾಲೂಕಿನ ಬಳೂರಗಿ ತಾಂಡದ ಸರ್ವೆ ನಂ. 290/4ರಲ್ಲಿ ಮೂರು ಎಕರೆಯಲ್ಲಿ ಬೆಳೆದಿದ್ದ ಬಾಳೆ ಬೆಳೆ ಅಕಾಲಿಕ ಭಾರಿ ಮಳೆ ಹಾಗೂ ಗಾಳಿಗೆ ಧರೆಗೆ ಉರುಳಿದ್ದು, ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
ಸುಮಾರು 4 ಸಾವಿರ ಬಾಳೆ ಗಿಡಗಳಲ್ಲಿ 3 ಸಾವಿರಕ್ಕೂ ಹೆಚ್ಚು ಗಿಡಗಳು ನೆಲಕ್ಕುರುಳಿದ್ದು, ಸುಮಾರು 6 ಲಕ್ಷ ರೂಪಾಯಿಗೂ ಅಧಿಕ ಹಾನಿಯಾಗಿದೆ ಎಂದು ಬಾಳೆ ಬೆಳೆದ ರೈತ ಮಹಿಳೆ ಸಂಗೀತಾ ದೇವಲು ರಾಠೋಡ ಅಳಲು ತೋಡಿಕೊಂಡರು.
ಬೆಳೆ ಕಟಾವಿನ ನಿರೀಕ್ಷೆಯಲ್ಲಿದ್ದ ಸಂದರ್ಭದಲ್ಲಿ ಸುರಿದ ಅಕಾಲಿಕ ಮಳೆ ಹಾಗೂ ಬಿರುಗಾಳಿಯಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
- *ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ*
“ಬಾಳೆ ನಾಟಿಗೆ ಸುಮಾರು ಎರಡು ಲಕ್ಷ ರೂಪಾಯಿ ಸಾಲ-ಸೂಲ ಮಾಡಿ ಬೆಳೆ ಬೆಳೆದಿದ್ದೇವೆ. ಬೆಳೆ ಸರಿಯಾಗಿ ಕೈ ಸೇರಿದರೆ ಸುಮಾರು ಆರು ಲಕ್ಷ ರೂಪಾಯಿವರೆಗೆ ಲಾಭವಾಗುವ ನಿರೀಕ್ಷೆ ಇತ್ತು. ಆದರೆ ಅಕಾಲಿಕ ಮಳೆ ಮತ್ತು ಗಾಳಿಯಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇದೀಗ ಬದುಕು ನಡೆಸುವುದೇ ಕಷ್ಟಕರವಾಗಿದೆ” ಎಂದು ರೈತ ಮಹಿಳೆ ಸಂಗೀತಾ ದೇವಲು ರಾಠೋಡ ನೋವು ತೋಡಿಕೊಂಡರು.
ಹಾನಿಗೊಳಗಾದ ಬೆಳೆಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮದ ರೈತರು ಉಪಸ್ಥಿತರಿದ್ದರು.


















