ಪುರಸಭೆ ಕಚೇರಿ ಬಾಗಿಲಿಗೆ ಬೀಗ ಜಡೆದು ಪ್ರತಿಭಟನೆ ಮಾಡಿದ ಮಹಿಳೆಯರು
ಅಫಜಲಪುರ, ಜು. 20: ಪಟ್ಟಣದ ವಾರ್ಡ್ ನಂ. 17ರ ವಿವಿಧ ಮೂಲಸೌಕರ್ಯ ಸಮಸ್ಯೆಗಳನ್ನು ತಕ್ಷಣ ಬಗೆಹರಿಸುವಂತೆ ಆಗ್ರಹಿಸಿ ವಾರ್ಡ್ನ ಮಹಿಳಾ ನಿವಾಸಿಗಳು ಸೋಮವಾರ ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. “ನಮ್ಮ ಓಣಿಗಳಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲ, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ, ಬೀದಿ ದೀಪಗಳಿಲ್ಲ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆ ವೇಳೆ ವಾರ್ಡ್ ನಿವಾಸಿಗಳು ಕೆಲಕಾಲ ಪುರಸಭೆ ಕಚೇರಿಯ ಮುಖ್ಯ ಬಾಗಿಲಿಗೆ ಬೀಗ ಜಡೆದು ಪ್ರತಿಭಟನೆ ನಡೆಸಿದರು. ಇದರಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಕಾಲ ಕಚೇರಿಯೊಳಗೇ ಉಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಬಳಿಕ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ನಂತರ ಪರಿಸ್ಥಿತಿ ತಿಳಿಯಾಯಿತು.
ಆದರೂ ಪಟ್ಟು ಬಿಡದ ನಿವಾಸಿಗಳು, “ಕಚೇರಿಯಲ್ಲಿ ಕುಳಿತು ಭರವಸೆ ನೀಡುವುದರಿಂದ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ನಮ್ಮ ವಾರ್ಡ್ಗೆ ಬಂದು ಸಮಸ್ಯೆಗಳನ್ನು ಕಣ್ಣಾರೆ ನೋಡಿ” ಎಂದು ಅಧಿಕಾರಿಗಳನ್ನು ವಾರ್ಡ್ಗೆ ಕರೆದುಕೊಂಡು ಹೋದರು. ಅಲ್ಲಿ ಚರಂಡಿ, ರಸ್ತೆ, ಕುಡಿಯುವ ನೀರು ಹಾಗೂ ಬೀದಿ ದೀಪ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸ್ಥಳದಲ್ಲೇ ತೋರಿಸಿದರು.
ಸ್ಥಳ ಪರಿಶೀಲಿಸಿದ ಅಧಿಕಾರಿಗಳು ಶೀಘ್ರದಲ್ಲೇ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ, ಒಂದು ವಾರದೊಳಗೆ ವಾರ್ಡ್ನ ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಪುರಸಭೆ ಕಚೇರಿ ಎದುರು ಮತ್ತೊಮ್ಮೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ವಾರ್ಡ್ ನಿವಾಸಿಗಳು ಖಡಕ್ ಎಚ್ಚರಿಕೆ ನೀಡಿದರು.
ಅನಿಸಿಕೆ1
“ನಮ್ಮ ಮನೆಯ ಮುಂದೆ ಅನೇಕ ತಿಂಗಳಿಂದ ಚರಂಡಿ ನೀರು ನಿಂತು ಕೆರೆಯಂತಾಗಿದೆ. ಇದರಿಂದ ಸುತ್ತಮುತ್ತ ದುರ್ವಾಸನೆ ಹರಡುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಡೆಂಗ್ಯೂ, ಮಲೇರಿಯಾ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಹಲವು ಬಾರಿ ಪುರಸಭೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಶಾಶ್ವತ ಪರಿಹಾರ ದೊರೆತಿಲ್ಲ. ಅಧಿಕಾರಿಗಳು ಇನ್ನು ಮುಂದೆ ನಿರ್ಲಕ್ಷ್ಯ ಮಾಡದೇ ತಕ್ಷಣ ಸಮಸ್ಯೆ ಬಗೆಹರಿಸಬೇಕು.”
— ಶಾಂತಾ ಎನ್. ಶಿವಣಗಿ,( ವಾರ್ಡ್ ನಿವಾಸಿ, ಅಫಜಲಪುರ)
ಪ್ರತಿಭಟನೆಯಲ್ಲಿ ಶ್ರೀಮತಿ ಶಾಂತಾ ಶಿವಣಗಿ, ಧಾನು ಪತಾಟೆ, ಶಶಿಕಾಂತ ಶಿವಣಗಿ, ಸಿದ್ದು ರಾಣಿ, ಶಾಂತು ಅಂಜುಟಗಿ, ಶಾಂತುಗೌಡ ಪಾಟೀಲ ಸೊನ್ನ, ಬಸವರಾಜ ಸೇರಿದಂತೆ ವಾರ್ಡ್ನ ಅನೇಕ ಮಹಿಳೆಯರು ಹಾಗೂ ನಿವಾಸಿಗಳು ಭಾಗವಹಿಸಿದ್ದರು.
.