ಶ್ರಾವಣ ಮಾಸದ ಅಂಗವಾಗಿ ತಾಯಂದಿರಿಗೆ ಉಡಿ ತುಂಬಿದ ಶೆಟ್ಟಿ ಕುಟುಂಬ
ಅಫಜಲಪುರ: ಶ್ರಾವಣ ಮಾಸದ ಪವಿತ್ರ ಅಂಗವಾಗಿ ಅಫಜಲಪುರ ಪಟ್ಟಣದ ಅಕ್ಕ ಮಹಾದೇವಿ ನಗರದಲ್ಲಿರುವ ದ್ರಾಕ್ಷಿಣಿ ನಿವಾಸದಲ್ಲಿ ಮಹಾಲಕ್ಷ್ಮಿ ಪೂಜೆ ಹಾಗೂ 150ಕ್ಕೂ ಹೆಚ್ಚು ಸುಮಂಗಲಿ ತಾಯಂದಿರಿಗೆ ಉಡಿ ತುಂಬುವ ಕಾರ್ಯಕ್ರಮ ಧಾರ್ಮಿಕ ಭಕ್ತಿ, ಸಾಂಪ್ರದಾಯಿಕ ಸಂಭ್ರಮದೊಂದಿಗೆ ನೆರವೇರಿತು.
ಮಹಿಳೆಯರು ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಕುಟುಂಬದ ಸುಖ-ಶಾಂತಿ, ಆರೋಗ್ಯ, ಐಶ್ವರ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ನಂತರ ಆಗಮಿಸಿದ್ದ ಸುಮಂಗಲಿಯರಿಗೆ ಅರಿಶಿನ, ಕುಂಕುಮ, ಹೂವು, ಬಳೆ, ತಾಂಬೂಲ, ಹಣ್ಣು ಹಾಗೂ ಉಡಿ ನೀಡಿ ಗೌರವಿಸಲಾಯಿತು.
ಖ್ಯಾತ ಉದ್ಯಮಿ ಶರಣು ರತ್ನಕರ ಶೆಟ್ಟಿ ಹಾಗೂ ಸಮಾಜ ಸೇವಕಿ ದೇವಿಕಾ ಶರಣು ಶೆಟ್ಟಿ ಮಾತನಾಡಿ, “ತಾಯಂದಿರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಶ್ರೇಷ್ಠ ಪರಂಪರೆಯಾಗಿದೆ. ಶ್ರಾವಣ ಮಾಸದಲ್ಲಿ ಸುಮಂಗಲಿಯರಿಗೆ ಉಡಿ ತುಂಬುವ ಮೂಲಕ ಅವರ ಸೌಭಾಗ್ಯ ವೃದ್ಧಿಯಾಗಲಿ, ಕುಟುಂಬಗಳಲ್ಲಿ ಸುಖ, ಶಾಂತಿ ಹಾಗೂ ಸಮೃದ್ಧಿ ನೆಲೆಸಲಿ ಎಂಬ ಉದ್ದೇಶ ಹೊಂದಿದ್ದೇವೆ. ಕಳೆದ 25 ವರ್ಷಗಳಿಂದ ಶೆಟ್ಟಿ ಪರಿವಾರದ ವತಿಯಿಂದ ಈ ಸಮಾಜಮುಖಿ ಕಾರ್ಯಕ್ರಮವನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದ್ದೇವೆ” ಎಂದು ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ಸಂಘದ ಜಿಲ್ಲಾ ಅಧ್ಯಕ್ಷೆ ರೇಣುಕಾ ಆರ್. ಡಾಂಗೆ ಮಾತನಾಡಿ, “ಉಡಿ ತುಂಬುವುದು ಕೇವಲ ಆಚರಣೆಯಲ್ಲ; ಅದು ಮಹಿಳೆಯರ ಗೌರವ, ಕುಟುಂಬದ ಒಗ್ಗಟ್ಟು ಹಾಗೂ ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಸಾರುವ ಪವಿತ್ರ ಸಂಪ್ರದಾಯವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಪ್ರೀತಿ, ವಿಶ್ವಾಸ ಮತ್ತು ಬಾಂಧವ್ಯವನ್ನು ಹೆಚ್ಚಿಸುತ್ತವೆ” ಎಂದು ಅಭಿಪ್ರಾಯಪಟ್ಟರು.
ಮಳೇಂದ್ರ ಮಠದ ಪೂಜ್ಯ ಶ್ರೀ ವಿಶ್ವರಾದ್ಯ ಮಳೇಂದ್ರ ಶಿವಾಚಾರ್ಯರು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ಗಾಡಿ ಸಾಹುಕಾರ, ಬಸಣ್ಣ ಗುಣಾರಿ, ಸುನೀಲ ಶೆಟ್ಟಿ, ಕಿರಣ ಶೆಟ್ಟಿ, ಸಂತೋಷ ಶೆಟ್ಟಿ, ಗುಂಡಪ್ಪ ಮೇದಾರ ಸೇರಿದಂತೆ ಜ್ಯೋತಿ ರೂಗಿ, ಚೆನ್ನಮ್ಮ ಗುಣಾರಿ, ಶಶಿಕಲಾ, ಜಗದೇವಿ, ಬನಶಂಕರಿ ದೇಶಪಾಂಡೆ, ಸುರೇಖಾ ಅಂಬೂರೆ, ಸುಹಾಸಿನಿ ಡಂಗಿ, ಪ್ರತಿಭಾ ಮಹಿಂದರಕರ್, ರಾಜೇಶ್ವರಿ, ಸೌಮ್ಯ ಪಟ್ನೆ, ಪ್ರಿಯಾಂಕ್ ಕೋರಿ ಸೇರಿದಂತೆ ಶೆಟ್ಟಿ ಕುಟುಂಬದ ಸದಸ್ಯರು, ಅಕ್ಕ ಮಹಾದೇವಿ ನಗರದ ನಿವಾಸಿಗಳು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.



















