ಮೇಜರ್ ಧ್ಯಾನಚಂದ್ ವಿಶ್ವ ಕಂಡ ಪ್ರತಿಭಾನ್ವಿತ ಹಾಕಿ ಆಟಗಾರ: ಸಂಗನಗೌಡ ಹಚಡದ
ಇಂಡಿ: ಪಟ್ಟಣದ ಜಿ.ಆರ್. ಗಾಂಧಿ ಹಾಗೂ ವೈ.ಎ.ಪಿ. ಕಾಮರ್ಸ್ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಸಂಗನಗೌಡ ಹಚಡದ ಮಾತನಾಡಿ, ಮೇಜರ್ ಧ್ಯಾನಚಂದ್ ಅವರು ವಿಶ್ವ ಕಂಡ ಪ್ರತಿಭಾನ್ವಿತ ಹಾಕಿ ಆಟಗಾರರಾಗಿದ್ದು, ಭಾರತಕ್ಕೆ ಒಲಿಂಪಿಕ್ ಹಾಕಿಯಲ್ಲಿ ಸತತ ಮೂರು ಬಾರಿ ಚಿನ್ನದ ಪದಕ ತಂದುಕೊಟ್ಟ ಕ್ರೀಡಾಪಟು ಎಂದು ಹೇಳಿದರು.
ಜರ್ಮನಿಯಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಧ್ಯಾನಚಂದ್ ಅವರ ಆಟದ ಕೈಚಳಕ ಹಾಗೂ ಗೋಲು ಗಳಿಸುವ ಸಾಮರ್ಥ್ಯವನ್ನು ಕಂಡು ಜರ್ಮನಿಯ ನಾಯಕ ಅಡಾಲ್ಫ್ ಹಿಟ್ಲರ್ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ತಮ್ಮ ಕ್ರೀಡಾ ಜೀವನದಲ್ಲಿ 700ಕ್ಕೂ ಹೆಚ್ಚು ಗೋಲುಗಳನ್ನು ಗಳಿಸಿ ‘ಹಾಕಿ ಮಾಂತ್ರಿಕ’ ಎಂದು ಪ್ರಸಿದ್ಧರಾದರು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ ಮಾತನಾಡಿ, ಕ್ರೀಡೆ ಎಲ್ಲರಿಗೂ ಪ್ರಿಯವಾದದ್ದು. ವಿದ್ಯಾರ್ಥಿಗಳು ಸಕ್ರಿಯವಾಗಿ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಧ್ಯಾನಚಂದ್ ಅವರಂತಹ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ದೈಹಿಕ ನಿರ್ದೇಶಕ ಚಿದುಗೌಡ ಬಿರಾದಾರ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಸಿ.ಎಸ್. ಬಿರಾದಾರ ವಂದಿಸಿದರು. ಡಿ.ಎಚ್. ಬಗಲಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಡಾ. ಸುರೇಂದ್ರ, ಶ್ರೀಕಾಂತ ರಾಠೋಡ, ಶ್ರೀ ಕೋರವಾರ, ಪಿ.ಕೆ. ರಾಠೋಡ, ರಾಘವೇಂದ್ರ ಇಂಗನಾಳ, ಆದರ್ಶ ಖೇಡಗಿ, ಐಶ್ವರ್ಯ ಕಕ್ಕಳಮೇಲಿ, ಶ್ರೀಮತಿ ಸಕ್ಕೂಬಾಯಿ ಗುರಾಣಿ ಸೇರಿದಂತೆ ಪ್ರಾಧ್ಯಾಪಕ ವೃಂದ ಉಪಸ್ಥಿತರಿದ್ದರು.


















