ಗಾಳಿಯಲ್ಲಿ ನೇತಾಡುತ್ತಿರುವ ಟಿಸಿ ತಂತಿಗಳು: ಅನಾಹುತಕ್ಕೂ ಮುನ್ನ ಕ್ರಮಕ್ಕೆ ಸಾರ್ವಜನಿಕರ ಆಗ್ರಹ.
ರಾಘವೇಂದ್ರ ದೇವಸ್ಥಾನದ ಹಿಂಭಾಗದ ಶುದ್ಧ ಕುಡಿಯುವ ನೀರಿನ ಘಟಕದ ಬಳಿ ಅಪಾಯದ ಸ್ಥಿತಿ.
ಮುದ್ದೇಬಿಹಾಳ: ನಗರದ ರಾಘವೇಂದ್ರ ದೇವಸ್ಥಾನದ ಹಿಂಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಪಕ್ಕದಲ್ಲೇ ಅಳವಡಿಸಿರುವ ಟ್ರಾನ್ಸ್‌ಫಾರ್ಮರ್ (ಟಿಸಿ) ಸುತ್ತ ಯಾವುದೇ ರಕ್ಷಣಾತ್ಮಕ ತಂತಿ ಬೇಲಿ ಇಲ್ಲದೆ ಅಪಾಯಕಾರಿಯಾಗಿ ಬಿಟ್ಟಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಟಿಸಿ ಸುತ್ತಮುತ್ತ ವಿದ್ಯುತ್ ತಂತಿಗಳು ಸಂಪೂರ್ಣವಾಗಿ ಹೊರಗೆ ನೇತಾಡುತ್ತಿದ್ದು, ಕೆಲ ತಂತಿಗಳು ಕಟ್ ಆಗಿರುವ ಸ್ಥಿತಿಯಲ್ಲಿವೆ. ಇದರಿಂದ ಅಲ್ಲಿಂದ ಸಂಚರಿಸುವ ಸಾರ್ವಜನಿಕರು, ಮಕ್ಕಳು ಹಾಗೂ ಜಾನುವಾರುಗಳಿಗೆ ಜೀವಾಪಾಯ ಎದುರಾಗುವ ಭೀತಿ ವ್ಯಕ್ತವಾಗಿದೆ. ತಿಳಿಯದೆ ಯಾರಾದರೂ ತಂತಿಗಳನ್ನು ಮುಟ್ಟಿದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.
ವಿಶೇಷವಾಗಿ ಶುದ್ಧ ಕುಡಿಯುವ ನೀರಿನ ಘಟಕ ಇರುವುದರಿಂದ ಸಾರ್ವಜನಿಕರ ಓಡಾಟ ಹೆಚ್ಚಾಗಿದ್ದು, ದಿನನಿತ್ಯ ಜನರು ನೀರು ಪಡೆಯಲು ಆಗಮಿಸುತ್ತಾರೆ. ಇಂತಹ ಪ್ರದೇಶದಲ್ಲೇ ಅಪಾಯಕಾರಿ ರೀತಿಯಲ್ಲಿ ಟ್ರಾನ್ಸ್‌ಫಾರ್ಮರ್ ಇರುವುದರಿಂದ ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ತಕ್ಷಣವೇ ಹೆಸ್ಕಾಂ ಹಾಗೂ ಪುರಸಭೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಟಿಸಿ ಸುತ್ತ ಭದ್ರತಾ ತಂತಿ ಬೇಲಿ ಅಳವಡಿಸುವುದರ ಜೊತೆಗೆ ಹೊರಗೆ ಕಾಣಿಸುತ್ತಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಿ ಮುಂದಾಗಬಹುದಾದ ಅನಾಹುತ ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಾರ್ವಜನಿಕರ ಮನವಿ : “ಯಾವುದೇ ಅವಘಡ ಸಂಭವಿಸುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತುಕೊಂಡು ಭದ್ರತಾ ಕ್ರಮ ಕೈಗೊಳ್ಳಬೇಕು,” ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.