ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಪೂವಿತಾ ಎಸ್ ನೇಮಕ
ರಾಯಚೂರು: ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮ (ಕೆಯುಐಡಿಎಫ್‌ಸಿ) ವ್ಯವಸ್ಥಾಪಕ ನಿರ್ದೇಶಕಿ ಪೂವಿತಾ ಎಸ್. ಅವರನ್ನು ಹೊಸ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಪೂವಿತಾ ಅವರು ಐಎಎಸ್ 2016ರ ತಂಡದವರು.
ಹಣಕಾಸು ಇಲಾಖೆಯ (ಬಜೆಟ್ ಮತ್ತು ಸಂಪನ್ಮೂಲಗಳು) ಜಂಟಿ ಕಾರ್ಯದರ್ಶಿಯಾಗಿದ್ದ ನಿತಿಶ್ ಕೆ. ಅವರನ್ನು 2024ರ ಜುಲೈ 6ರಂದು ವರ್ಗಾವಣೆ ಮಾಡಿ ರಾಯಚೂರು ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಲಾಗಿತ್ತು.
ನಿತೀಶ್ ಅವರು 2015ರ ತಂಡದ ಐಎಎಸ್ ಅಧಿಕಾರಿಯಾಗಿರುವ ನಿತಿಶ್ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ನಗರ ಸುತ್ತಾಡಿ ‘ಇಷ್ಟು ಹೊಲಸು ಊರು ನಾನು ಎಲ್ಲಿಯೂ ನೋಡಿರಲಿಲ್ಲ’ ಎಂದು ಸಭೆಯಲ್ಲೇ ಬೇಸರ ವ್ಯಕ್ತಪಡಿಸಿದ್ದರು. ನಂತರ ಮಹಾನಗರಪಾಲಿಕೆಯ ಮೂಲಕ ನಗರದಲ್ಲಿ ಸ್ವಚ್ಛತೆ ಕೈಗೊಳ್ಳಲು ಸಾಕಷ್ಟು ಪರಿಶ್ರಮ ವಹಿಸಿದರು.
ಸೇನೆಯಲ್ಲಿ ರಾಯಚೂರು ಜಿಲ್ಲೆಯ ಯುವಕರಿಗೆ ಅವಕಾಶ ಮಾಡಿಕೊಡಲು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಸೇನಾ ಭರ್ತಿ ರ್‍ಯಾಲಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿಸಿದ್ದರು.
ಜಿಲ್ಲಾಡಳಿತ ಕಚೇರಿ ಇದ್ದರೂ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲು ಹಿಂದಿನ ಜಿಲ್ಲಾಧಿಕಾರಿಗಳು ಆಸಕ್ತಿ ತೋರಿಸಿರಲಿಲ್ಲ. ಆದರೆ, ನಿತಿಶ್ ದಿಟ್ಟ ಕ್ರಮ ಕೈಗೊಂಡು ಹೊಸ ಕಟ್ಟಡಕ್ಕೆ ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರಿಸಿದರು. ಬಾಡಿಗೆ ಕಟ್ಟಡದಲ್ಲಿದ್ದ ಅನೇಕ ಸರ್ಕಾರಿ ಕಚೇರಿಗಳಿಗೆ ಹೊಸ ಕಟ್ಟಡದಲ್ಲಿ ಜಾಗ ಒದಗಿಸಿದರು.
ಜಿಲ್ಲೆಯಲ್ಲಿ ಪ್ರಮುಖ ಪ್ರವಾಸಿ ತಾಣಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವ ಕಳಿಸಿದರು. ರಾಯಚೂರು ಕೋಟೆ ಅಭಿವೃದ್ಧಿ ಹಾಗೂ ವೃತ್ತಗಳ ಅಭಿವೃದ್ಧಿಗೆ ನೀಲನಕ್ಷೆ ಪಡಿಸಿ ಕಾರ್ಯಪ್ರವೃತ್ತರಾಗಿದ್ದರು. ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿರುವ ಕಾರಣ ವೃತ್ತದ ಅಭಿವೃದ್ದಿ ಅರ್ಧಕ್ಕೆ ನಿಂತಿದೆ.
ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಯಚೂರು ಜಿಲ್ಲಾ ಉತ್ಸವ ಮಾಡಿದ್ದು, ಒಂದು ಐತಿಹಾಸಿಕ ಸಾಧನೆಯಾಗಿದೆ.



















