ತಳವಾರ ಸಮಾಜದ ಇತಿಹಾಸ ತಿಳಿದುಕೊಳ್ಳುವುದು ಅಗತ್ಯ:ಮಲ್ಲಪ್ಪ ನಾಟೀಕಾರ
ಇಂಡಿ, ಜು. 26: ತಳವಾರ ಸಮಾಜಕ್ಕೆ ತನ್ನದೇ ಆದ ವೈಭವಯುತ ಇತಿಹಾಸವಿದ್ದು, ಅದರ ಬಗ್ಗೆ ಅರಿವಿಲ್ಲದ ಕೆಲವರು ಸಮಾಜದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ಸಮಾಜದ ಜನರು, ವಿಶೇಷವಾಗಿ ಯುವಕರು, ತಳವಾರ ಸಮಾಜದ ನೈಜ ಇತಿಹಾಸವನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ ಎಂದು ತಳವಾರ ಸಮಾಜದ ಹಿರಿಯ ಮುಖಂಡ ಮಲ್ಲಿಕಾರ್ಜುನ ನಾಟೀಕಾರ ಹೇಳಿದರು.
ನಗರದಲ್ಲಿ ಭಾನುವಾರ ತಳವಾರ ಸೇವಾ ಸಮಿತಿ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಸಮಾಜ ಇನ್ನೂ ಮೂಢನಂಬಿಕೆಯ ಕತ್ತಲೆಯಿಂದ ಸಂಪೂರ್ಣ ಹೊರಬರಬೇಕಿದ್ದು, ಶಿಕ್ಷಣ, ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹೊಸ ಹೆಜ್ಜೆ ಇಡಬೇಕಾಗಿದೆ ಎಂದು ಹೇಳಿದರು.
ಉದ್ದೇಶಪೂರ್ವಕವಾಗಿ ಕೆಲವರು ಸಮಾಜದ ಬಗ್ಗೆ ತಪ್ಪು ಕಲ್ಪನೆಗಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಗೊಂದಲಗಳಿಗೆ ಕಿವಿಗೊಡದೆ ಸಮಾಜದ ನೈಜ ಇತಿಹಾಸವನ್ನು ಅಧ್ಯಯನ ಮಾಡಿ ಅರಿತುಕೊಳ್ಳುವಂತೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹಾಗೂ ತಳವಾರ ಸಮಾಜದ ಮುಖಂಡ ಸಿದ್ದಪ್ಪ ನಾಟೀಕಾರ ಮಾತನಾಡಿ, ತಳವಾರ ಸಮುದಾಯದ ಚಾರಿತ್ರಿಕ ಹಿನ್ನೆಲೆಯನ್ನು ವಿವರಿಸಿದರು. ಪುರಾತನ ಕಾಲದಿಂದಲೂ ತಳವಾರ ಸಮಾಜದವರು ಕೋಟೆ-ಕೊತ್ತಲುಗಳ ಹಾಗೂ ಗ್ರಾಮಗಳ ರಕ್ಷಣೆಯಲ್ಲಿ ಮಹತ್ವದ ಪಾತ್ರವಹಿಸಿ, ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಇತಿಹಾಸ ನಿರ್ಮಿಸಿದ್ದಾರೆ ಎಂದು ಹೇಳಿದರು.
ಮಧ್ಯಕಾಲೀನ ಹಾಗೂ ಆಧುನಿಕ ಭಾರತದ ಇತಿಹಾಸದಲ್ಲಿ ತಳವಾರರು ಸರ್ಕಾರದ ಪ್ರತಿನಿಧಿಗಳಾಗಿ, ಗ್ರಾಮ ರಕ್ಷಕರು ಹಾಗೂ ಗ್ರಾಮ ಪೊಲೀಸ್ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಶೌರ್ಯ ಪ್ರದರ್ಶಿಸಿದ ಅನೇಕ ತಳವಾರರಿಗೆ ‘ನಾಯಕ’ ಪಟ್ಟ ದೊರೆತು ಪಾಳೇಗಾರರ ಹುದ್ದೆಗೂ ಏರಿದ ಉದಾಹರಣೆಗಳಿವೆ ಎಂದು ತಿಳಿಸಿದರು.
ಪಾಳೇಗಾರರ ಆಡಳಿತದಲ್ಲಿ ಕಪ್ಪ ವಸೂಲಿ, ಊರ ಗಡಿ ಕಾಯುವುದು ಸೇರಿದಂತೆ ಗ್ರಾಮ ಭದ್ರತೆಯ ಹೊಣೆಗಾರಿಕೆ ತಳವಾರರದ್ದಾಗಿತ್ತು. ಉತ್ತರ ಕರ್ನಾಟಕದಲ್ಲಿ ‘ತಳವಾರ’, ಮಧ್ಯ ಕರ್ನಾಟಕದಲ್ಲಿ ‘ನಾಯಕ ಬೇಡ’ ಹಾಗೂ ಹಳೆ ಮೈಸೂರು ಭಾಗದಲ್ಲಿ ‘ವಾಲ್ಮೀಕಿ’ ಎಂಬ ಹೆಸರುಗಳು ಹೆಚ್ಚು ಬಳಕೆಯಲ್ಲಿವೆ ಎಂದು ವಿವರಿಸಿದರು.
1884ರ ಬಿಜಾಪುರ ಜಿಲ್ಲಾ ಗೆಜೆಟಿಯರ್ನಲ್ಲಿ ತಳವಾರರನ್ನು ಗ್ರಾಮ ಕಾವಲುಗಾರರು (Village Watchmen) ಎಂದು ದಾಖಲಿಸಲಾಗಿದೆ. ಆದಿಲ್ಶಾಹಿ ಕಾಲದ ವತನ ಪತ್ರಗಳು, ಇನಾಮು ದಾಖಲೆಗಳು ಹಾಗೂ ಶಾಸನಗಳಲ್ಲಿ ತಳವಾರರ ಬಗ್ಗೆ ಉಲ್ಲೇಖಗಳಿದ್ದು, ಇವು ಸಮುದಾಯದ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಸ್ವಾತಂತ್ರ್ಯಪೂರ್ವದಲ್ಲಿ ಗ್ರಾಮಗಳಲ್ಲಿ ಬೀದಿ ದೀಪ ಹಚ್ಚುವುದು, ಕಳ್ಳರನ್ನು ಹಿಡಿಯುವುದು, ಗ್ರಾಮದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ತಳವಾರರು ನಿರ್ವಹಿಸುತ್ತಿದ್ದರು. ವಿಜಯನಗರ ಸಾಮ್ರಾಜ್ಯದ ಪರಂಪರೆಯಂತೆ ಇಂದಿಗೂ ದಸರಾ ಸಂದರ್ಭದಲ್ಲಿ ಬನ್ನಿ ಮರವನ್ನು ಖಡ್ಗದಿಂದ ಕತ್ತರಿಸುವ ಸಂಪ್ರದಾಯವನ್ನು ಅನೇಕ ಗ್ರಾಮಗಳಲ್ಲಿ ತಳವಾರ ಸಮುದಾಯದವರು ಮುಂದುವರಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ತಳವಾರ ಸಮಾಜದ ವೈಭವಯುತ ಇತಿಹಾಸವನ್ನು ಯುವಪೀಳಿಗೆ ಅಧ್ಯಯನ ಮಾಡಿ, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಲಕ್ಷ್ಮಣ ಡೋಂಗ್ರೋಜಿ, ಚಂದ್ರಮ ತಳವಾರ, ಸೋಮು ಜಮಾದಾರ, ಸಿದ್ಧರಾಮ ಕೋಳಿ,ಡಾ ಸುರೇಶ ಬಿಜಾಪುರ, ರವಿ ರಾಯಜಿ , ನಿಂಗಪ್ಪ ತಿಳಗುಳ
ಸಂಜು ಕೋಳಿ, ಸುರೇಶ್ ಡೊಂಗ್ರೋಜಿ,ಅರವಿಂದ ದೊಡ್ಡಮನಿ, ಇಂದ್ರ ತಳವಾರ, ಶ್ರೀಶೈಲ್ ತಳವಾರ, ಶಾಂತು ಜಮಾದಾರ, ಅಮೋಗಿ ತಳವಾರ, ಶರಣು ತಳವಾರ, ಮಹೇಶ್ ಅರ್ಜುನಾಳ, ಅಭಿಷೇಕ್ ಅಂಜುಟಿಗಿ, ಭೀಮರಾಯ ಬಿಲ್ಕಾರ, ಪರಶುರಾಮ ವಾಲಿಕಾರ, ಭೀಮಶಂಕರ ವಾಲಿಕಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.