ಸಾಲದ ಹೊರೆ ತಾಳಲಾರದೆ ಹಿಂಚಗೇರಾದಲ್ಲಿ ಯುವ ರೈತ ಆತ್ಮಹತ್ಯೆ
ಅಫಜಲಪುರ, ತಾಲೂಕಿನ ಹಿಂಚಗೇರಾ ಗ್ರಾಮದ ಯುವ ರೈತ ಅಂಬರೀಶ್ ತಂದೆ ಶಂಕ್ರೆಪ್ಪ ಶಿವಪೂರ (21) ಅವರು ತಮ್ಮ ಜಮೀನಿನಲ್ಲಿ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ಜುಲೈ 25ರ ರಾತ್ರಿ ನಡೆದಿದೆ.
ಸಂಬಂಧಿಕರ ಮಾಹಿತಿ ಪ್ರಕಾರ, ಕುಟುಂಬದ ಮೇಲೆ ಕೆನರಾ ಬ್ಯಾಂಕ್‌ನ ಸುಮಾರು ₹6 ಲಕ್ಷ ಸಾಲ ಹಾಗೂ ಖಾಸಗಿಯಾಗಿ ಸುಮಾರು ₹10 ಲಕ್ಷ ಸಾಲ ಇತ್ತು. ಸಾಲ ನೀಡಿದವರು ಆಗಾಗ ಹಣಕ್ಕಾಗಿ ಮನೆಗೆ ಬರುತ್ತಿದ್ದರಿಂದ ಕುಟುಂಬ ತೀವ್ರ ಮಾನಸಿಕ ಒತ್ತಡದಲ್ಲಿತ್ತು ಎನ್ನಲಾಗಿದೆ.
ಕಳೆದ ವರ್ಷ ಅತಿವೃಷ್ಟಿಯಿಂದ ಬೆಳೆ ಸಂಪೂರ್ಣ ಹಾನಿಗೊಳಗಾಗಿತ್ತು. ಈ ವರ್ಷ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿರಂತರ ಬೆಳೆ ನಷ್ಟದಿಂದ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತ್ತು. ತಂದೆಯ ಮೇಲಿನ ಸಾಲದ ಒತ್ತಡ ಹಾಗೂ ಕುಟುಂಬದ ಪರಿಸ್ಥಿತಿಯಿಂದ ಮನನೊಂದ ಅಂಬರೀಶ್ ಅವರು ತಮ್ಮ ಜಮೀನಿನಲ್ಲಿ ಕೀಟನಾಶಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.
ತಕ್ಷಣವೇ ಕುಟುಂಬಸ್ಥರು ಅವರನ್ನು ಅಫಜಲಪುರ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟರು.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಫಜಲಪುರ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು.


















