ಸಮಾಜ ಸೇವೆಯಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ: ಸುಖದೇವ ಕಟ್ಟಿಮನಿ
ಅಫಜಲಪುರ: ತಾಲೂಕಿನ ದೇವಲ ಗಾಣಗಾಪೂರದ ಯತಿರಾಜ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಾರ್ಥ್ ಕರ್ನಾಟಕ ಡೆಕ್ಕನ್ ಫೌಂಡೇಶನ್, ಪಾರಸ್ ಸಮಾಜ ಕಾರ್ಯ ಮಹಾವಿದ್ಯಾಲಯ ಕಲಬುರಗಿ ಹಾಗೂ ಮಹಾತ್ಮಾ ಗಾಂಧಿ ಸಮಾಜ ಕಾರ್ಯ ಮಹಾವಿದ್ಯಾಲಯ ಅಫಜಲಪುರ ಇವರ ಸಂಯುಕ್ತಾಶ್ರಯದಲ್ಲಿ “ಸಮಾಜ ಕಾರ್ಯ ಶಿಬಿರ” ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಕಲಬುರಗಿ ನಗರದ ಪಾರಸ್ ಎಂ.ಎಸ್.ಡಬ್ಲು ಕಾಲೇಜಿನ ಪ್ರಾಂಶುಪಾಲರಾದ ಸುಖದೇವ ಕಟ್ಟಿಮನಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ “ಸಮಾಜ ಸೇವೆಯೇ ಶ್ರೇಷ್ಠ ಸೇವೆ. ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಕಳಕಳಿ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವ ಮಹತ್ವದ ವೇದಿಕೆಗಳಾಗಿವೆ.
ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕಬೇಕು” ಎಂದು ಕರೆ ನೀಡಿದರು.
ಅಫಜಲಪುರ ಪಟ್ಟಣದ ಪಾರಸ್ ಸಮಾಜ ಕಾರ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ರಾಜಕುಮಾರ ಬಳೂರ್ಗಿ ಮಾತನಾಡಿ, ಸಮಾಜ ಕಾರ್ಯ ಶಿಬಿರಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತವೆ. ಗ್ರಾಮೀಣ ಪ್ರದೇಶಗಳ ಸಮಸ್ಯೆಗಳನ್ನು ಅರಿತು ಸೇವಾಭಾವದಿಂದ ಕೆಲಸ ಮಾಡುವ ಮನೋವೃತ್ತಿ ಇಂತಹ ಕಾರ್ಯಕ್ರಮಗಳಿಂದ ಬೆಳೆಸಿಕೊಳ್ಳಬಹುದು ಎಂದು ತಿಳಿಸಿದರು.
ಶಿಬಿರದ ಸಹ ನಿರ್ದೇಶಕಿಯಾದ ಬಸೀರಾ ಗೊಟ್ಯಾಳ ಮಾತನಾಡಿ, ಇಂತಹ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಜವಾಬ್ದಾರಿ, ಸಹಕಾರ ಮನೋಭಾವ ಹಾಗೂ ಜನಸೇವೆಯ ಚಿಂತನೆ ಬೆಳೆಸುತ್ತವೆ ಎಂದು ಹೇಳಿದರು.
ಉಪನ್ಯಾಸಕರಾದ ಗುರು ಗಂಗನಳ್ಳಿ ಹಾಗೂ ಪ್ರಭು ಬಿರದಾರ ಮಾತನಾಡಿ, ಸಮಾಜ ಕಾರ್ಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು ಹಾಗೂ ಸೇವಾ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದರು.
ಈ ಶಿಬಿರದಲ್ಲಿ ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮಗಳು, ಸ್ವಚ್ಛತಾ ಅಭಿಯಾನ, ವರದಕ್ಷಿಣೆ ಪೀಡಗು, ಸಾರಾಯಿ ನಿಷೇಧ ಹಾಗೂ ಬಾಲಕಿಯರ ಮೇಲಿನ ಅತ್ಯಾಚಾರ ತಡೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಕಳೆದ ಎರಡು ದಿನಗಳಿಂದ ನಡೆಯುತ್ತಿವೆ.
ಪ್ರಸ್ತಾವಿಕವಾಗಿ ಮಲ್ಲಿಕಾರ್ಜುನ ಕಂಟಿ ಮಾತನಾಡಿದರು. ಶಿಬಿರದ ಉದ್ದೇಶ ಕುರಿತು ಜೈ ಭೀಮ ವಿವರಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಮೈನಾಜ್ ಬೇಗಂ ಸೇರಿದಂತೆ ಅನೇಕರಿದ್ದರು. ಜ್ಯೋತಿ ಅಲಂಕಾರ ಸ್ವಾಗತಿಸಿದರು.
ಚಂದ್ರಕಲಾ ಹಾಗೂ ಸೌಜನ್ಯ ಪ್ರಾರ್ಥನಾ ಗೀತೆ ನಡೆಸಿಕೊಟ್ಟರು.
ಸಮಾಜ ಕಾರ್ಯದ ಶಿಬಿರಾರ್ಥಿ ಸಿದ್ದರಾಮ ಶಿವಣಗಿ ಕಾರ್ಯಕ್ರಮ ನಿರೂಪಿಸಿದರು. ವಂದನಾರ್ಪಣೆಯನ್ನು ಅಪರಂಜಿ ಮೇತ್ರಿ ನೆರವೇರಿಸಿದರು.
.
.


















