ಕೆಕ್ಕರಸಾವಳಗಿ ಶಾಲೆಯಲ್ಲಿ 225 ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ·
ಅಫಜಲಪುರ: ಸರ್ಕಾರಿ ಶಾಲೆಗಳ ಮಕ್ಕಳು ಉತ್ತಮವಾಗಿ ಬೆಳೆದು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಮತ್ತು ದೇಶಕ್ಕೆ ಸೇವೆ ಸಲ್ಲಿಸುವ ಸತ್ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ನೋವೆಲ್ ಹೋಪ್ ಫೌಂಡೇಶನ್‌ನ ಸಿಎಸ್‌ಆರ್ ಎಕ್ಸಿಕ್ಯೂಟಿವ್ ದೀಪಕ್ ಆರ್. ಅಭಿಪ್ರಾಯಪಟ್ಟರು.
ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಕ್ಕರಸಾವಳಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ 225 ವಿದ್ಯಾರ್ಥಿಗಳಿಗೆ ಉಚಿತವಾಗಿ ಶಾಲಾ ಬ್ಯಾಗ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಸ್ಟೀಲ್ ಬಾಟಲ್ ಹಾಗೂ ಪ್ಲೇಟುಗಳನ್ನು ನೀಡುವ ಭರವಸೆಯನ್ನೂ ನೀಡಿದರು.
ನೋವೆಲ್ ಹೋಪ್ ಫೌಂಡೇಶನ್ ಸಂಸ್ಥೆ ಹಲವು ಕ್ಷೇತ್ರಗಳಲ್ಲಿ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದು, ಅದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಈಗಾಗಲೇ ಕಲ್ಬುರ್ಗಿ ಜಿಲ್ಲೆಯಲ್ಲಿ ಸುಮಾರು ಮೂರು ಸಾವಿರ ಬ್ಯಾಗ್‌ಗಳನ್ನು ಹಂಚಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸದಾ ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಆ ಕನಸುಗಳನ್ನು ನನಸಾಗಿಸಲು ಕಠಿಣ ಪರಿಶ್ರಮ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಂಸ್ಥೆಯ ಮುಖ್ಯ ಕಚೇರಿ ಬೆಂಗಳೂರಿನಲ್ಲಿ ಇದ್ದು, ರಾಜ್ಯದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲಾ ಮಕ್ಕಳಿಗೆ ಹಲವು ಸೌಲಭ್ಯಗಳನ್ನು ಒದಗಿಸುತ್ತಿರುವುದಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯಕುಮಾರ್ ಸೂರಪ್ಪನವರ, ನೋವೆಲ್ ಹೋಪ್ ಫೌಂಡೇಶನ್ ನಿಸ್ವಾರ್ಥವಾಗಿ ಕಾರ್ಯನಿರ್ವಹಿಸುವ ಎನ್‌ಜಿಒ ಸಂಸ್ಥೆಯಾಗಿದ್ದು, ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ಮತ್ತು ಅವರ ಮುಖದಲ್ಲಿ ನಗು ತರಲು ಮಹತ್ವದ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿದರು. ವಿದ್ಯಾರ್ಥಿಗಳು ಉತ್ತಮವಾಗಿ ಓದಿ ಉತ್ತಮ ಫಲಿತಾಂಶ ನೀಡಿದರೆ, ಸಂಸ್ಥೆ ಇನ್ನಷ್ಟು ಕಲಿಕಾ ಸೌಲಭ್ಯಗಳನ್ನು ಒದಗಿಸಲು ಮುಂದಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಜಕುಮಾರ ಯಂಕಂಚಿ, ಸಿದ್ದರಾಮ ಮಾಹೂರ, ಮಾಳಪ್ಪ ನೈಕೋಡಿ, ಬಸವರಾಜ ಕಿರಸಾವಳಗಿ, ಮುಖ್ಯಗುರು ಶಶಿಕಾಂತ ದೊಡ್ಮನಿ, ಪರಮಾನಂದ ಸರಸಂಬಿ, ವಿಜಯಕುಮಾರ ಸುತಾರ, ಮಹೇಶ್ ಬೋಳಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಜಾವೀದ ಹುಂಡೇಕಾರ ನಿರೂಪಿಸಿ ವಂದಿಸಿದರು.



















