ಮುಂದುವರೆದ ಧರಣಿ ಸತ್ಯಾಗ್ರಹ; ಬೇಡಿಕೆ ಈಡೇರದಿದ್ದರೆ ತಾಲೂಕು ಬಂದ್ ರೈತರು ಎಚ್ಚರಿಕೆ !!
ಅಫಜಲಪುರ: ಸ್ವಾಭಿಮಾನಿ ಕಬ್ಬು ಬೆಳೆಗಾರರ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಅಫಜಲಪುರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೂ ಮುಂದುವರಿದಿದೆ. ಹಗಲು-ರಾತ್ರಿ ನಿರಂತರವಾಗಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ರೈತರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಹೋರಾಟವನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಸರ್ಕಾರದ ನಿರ್ಲಕ್ಷ್ಯದಿಂದ ಭೀಮಾ ನದಿಯಲ್ಲಿ ನೀರಿನ ಕೊರತೆ ಉಂಟಾಗಿದ್ದು, ಕಲಬುರಗಿ ಜಿಲ್ಲೆಯ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬೆಳೆಗಳು ಒಣಗುತ್ತಿದ್ದು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಭೀಮಾ ನದಿಗೆ ನೀರು ಹರಿಸಬೇಕು ಹಾಗೂ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ರೈತರ ಸಂಪೂರ್ಣ ಸಾಲಮನ್ನಾ, ಬರ ಪರಿಹಾರ ಕ್ರಮಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ ಪ್ರತಿಭಟನಾಕಾರರು, ಮೂರು ದಿನಗಳಿಂದ ಧರಣಿ ನಡೆಸುತ್ತಿದ್ದರೂ ಯಾವುದೇ ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಸರ್ಕಾರ ಸ್ಪಂದಿಸದಿದ್ದರೆ ತಾಲೂಕು ಬಂದ್, ಹೆದ್ದಾರಿ ತಡೆ ಸೇರಿದಂತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.
ಅನಿಸಿಕೆ: 1
“ಭೀಮಾ ನದಿ ಸಂಪೂರ್ಣ ಬರಿದಾಗಿರುವುದರಿಂದ ತಾಲೂಕಿನ ಸಾವಿರಾರು ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಬ್ಬು ಸೇರಿದಂತೆ ಎಲ್ಲ ಬೆಳೆಗಳು ನೀರಿನ ಕೊರತೆಯಿಂದ ಒಣಗುವ ಸ್ಥಿತಿಯಲ್ಲಿವೆ. ಸರ್ಕಾರ ಕೂಡಲೇ ಉಜನಿ ಹಾಗೂ ನಾರಾಯಣಪೂರ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿ ರೈತರನ್ನು ರಕ್ಷಿಸಬೇಕು.
ಬಸವರಾಜ ಘಾಣೂರ( ರೈತ ಮುಖಂಡರು ಹಿಂಚಗೇರಾ)
ಅನಿಸಿಕೆ 2
ತಾಲೂಕಿನಲ್ಲಿ ಸುಮಾರು 70 ಸಾವಿರ ಎಕರೆ ಕಬ್ಬು ಬೆಳೆ ನೀರಿನ ಅಭಾವದಿಂದ ಅಪಾಯದ ಅಂಚಿನಲ್ಲಿದೆ. ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ. ರೈತರ ಹಿತದೃಷ್ಟಿಯಿಂದ ತಕ್ಷಣ ಭೀಮಾ ನದಿಗೆ ನೀರು ಹರಿಸಬೇಕು, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸಾಲಮನ್ನಾ ಹಾಗೂ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕು.
ಲತೀಪ್ ಪಟೇಲ ( ಹಿರಿಯ ರೈತ ಮುಖಂಡರು ಬೋಗನಳ್ಳಿ )
ಈ ಸಂದರ್ಭದಲ್ಲಿ ರೈತ ಮುಖಂಡರಾದ ರಮೇಶ ಹವಳಗಾ, ಹಿರಿಯ ವಕೀಲ ಶಂಕರಾವ ಹುಲ್ಲೂರ, ಕಲಾವಿದ ಚಂದು ಬನ್ನಟ್ಟಿ, ಸಿದ್ದಣ್ಣಗೌಡ ಪಾಟೀಲ,ಭೀಮರಾಯ ಗೌರ, ಮುರುಗೇಂದ್ರ ಮಸಳಿ, ಲತೀಪ್ ಪಟೇಲ, ರಮೇಶೆಟ್ಟಿ, ಶಾಂತು ಅಂಜುಟಗಿ, ರಮೇಶ್ ಪಾಟೀಲ್, ಶ್ರೀಮಂತ ಬಿರಾದರ್, ಬಸವರಾಜ ಗಾಣೂರ, ಭೀಮರಾಯ ತಳವಾರ, ಧನರಾಜ್ ಕೈರಾಟ್, ನೂರಮದ್, ಭಗವಾನ್, ರಾಜುಗೌಡ ಬಾಸಿಗಿ, ನಿಸಾರ್ ಪಟೇಲ್, ಕಾಸಿಂ ಪಟೇಲ್, ಮಹಿಬೂಬ್ ಪಟೇಲ್, ಚೌಮುರದಿನ್ ಪಟೇಲ್, ಶಿವಾನಂದ ಪೂಜಾರಿ, ಬಸಣ್ಣ ದೊಡ್ಡಮನಿ, ಚಾಂದ್ಸಾಬ್ ಕುಕುನೂರು, ಹುಲೆಪ್ಪ ಪೂಜಾರಿ ಸೇರಿದಂತೆ ಹಲವಾರು ರೈತರು ಭಾಗವಹಿಸಿದ್ದರು.