ತಂಬಾಕು ಮತ್ತು ಅದರ
ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಮಾರಕವಾಗಿದೆ.
ಅರಿಹಂತ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ-ಜಾಗೃತಿ ಕಾರ್ಯಕ್ರಮ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಂಬಾಕು ಮತ್ತು ಅದರ
ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಮಾರಕವಾಗಿದೆ.ಹಲವು ಗಂಭೀರ ದುಷ್ಪರಿಣಾಮಗಳು ಉಂಟಾಗಿ ಗಂಭೀರ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ. ವಿದ್ಯಾರ್ಥಿಗಳು ತಂಬಾಕು ಮತ್ತು ಅದರ ಉತ್ಪನ್ನಗಳ ಬಳಕೆಯಿಂದ ದೂರ ಇರಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎಸ್.ಗೌಡರ ಹೇಳಿದರು.
ಇಲ್ಲಿನ ಅರಿಹಂತ ಕಾಲೇಜಿನಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ-ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕ ಜಾಗೃತಿ ಕಾರ್ಯಕ್ರಮದ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
ತಂಬಾಕು ಮತ್ತು ಅದರ ಉತ್ಪನ್ನಗಳ ಬಳಕೆಯಿಂದ ಯುವಜನತೆ ಹೇಗೆ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಾರೆ ಎಂಬುದು ವಿದ್ಯಾರ್ಥಿಗಳು ಅರಿತು ಕೊಳ್ಳಬೇಕು ತಂಬಾಕು ಉತ್ಪನ್ನಗಳ ಸೇವನೆ ಮಾರಣಾಂತಿಕ ರೋಗಕ್ಕೆ ಕಾರಣವಾಗುತ್ತಿದ್ದು, ಹೆಚ್ಚಾಗಿ ಯುವ ಜನತೆಯೇ ಇದಕ್ಕೆ ಬಲಿಯಾಗುತ್ತಿರುವುದು ಖೇದದ ಸಂಗತಿ ತಂಬಾಕು ಸೇವನೆ ಬಹು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ತಂಬಾಕು ಉತ್ಪನ್ನಗಳಲ್ಲಿ ಸುಮಾರು 4000ಕ್ಕೂ ಹೆಚ್ಚು ವಿಷಕಾರಿ ರಸಾಯನಿಕಗಳಿವೆ. ಇದರಲ್ಲಿ ಶೇ.28ರಷ್ಟು ಕ್ಯಾನ್ಸರ್‌ಕಾರಕ ಅಂಶಗಳಿವೆ. ತಂಬಾಕು ಸೇವನೆಯ ಪರಿಣಾಮ ನೇರವಾಗಿ ದೇಹದ ಪ್ರತಿಯೊಂದು ಪ್ರಮುಖ ಅಂಗದ ಮೇಲೆ ಪರಿಣಾಮ ಬೀರುತ್ತದೆ. ತಂಬಾಕು ಸೇವನೆ ಪ್ರಚೋದಿಸುವ ಜಾಹೀರಾತು ನಿಷೇಧಕ್ಕೆ ಬಹಳಷ್ಟು ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಪ್ರತಿ ವರ್ಷ ವಿಶ್ವ ಆರೋಗ್ಯ ಸಂಸ್ಥೆಯು ಒಂದೊಂದು ಫೋಷ ವಾಕ್ಯದೊಂದಿಗೆ ತಂಬಾಕು ರಹಿತ ದಿನ,ಗುಲಾಬಿ ಆಂದೋಲನ ಹೀಗೆ ಹಲವಾರು ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ಶಾಲೆ, ಕಾಲೇಜು ಸುತ್ತಮುತ್ತಲ ಪ್ರದೇಶದಲ್ಲಿ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡಿದಲ್ಲಿ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಪೋಸ್ಟರ್ ಗಳ ಮೂಲಕ ತಿಳಿ ಹೇಳಿದರು.
ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ಜಾಗೃತಿ ಅಭಿಯಾನ ಕುರಿತು ಪ್ರತಿಜ್ಞಾವಿಧಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ನಾಗೇಶ್ ಎಸ್ ಕೆ ಬೋಧಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಿಪುಲ್ ಸಗರಿ ಮಾತನಾಡಿ, ತಂಬಾಕು ಸೇವನೆ ವ್ಯಾಪಕ ಸ್ವರೂಪ ಹೊಂದಿದೆ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಇದು ಅಡ್ಡಿಯುಂಟು ಮಾಡುವುದು ಮಾತ್ರವಲ್ಲದೆ ಮಾರಕವಾಗಿಯೂ ಪರಿಣಮಿಸುತ್ತದೆ. ಮಕ್ಕಳು, ವಿದ್ಯಾರ್ಥಿಗಳು, ಯುವಜನತೆ, ವಯಸ್ಕರು ಸೇರಿ ಎಲ್ಲ ವಯೋಮಾನದವರು ತಂಬಾಕು ಮತ್ತು ಅದರ ಉತ್ಪನ್ನಗಳ ಸೇವನೆಯಿಂದ ದೂರ ಇರಬೇಕು ಎಂದರು.
ಈ ವೇಳೆಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ನೂಡಲ ಅಧಿಕಾರಿ ಲಕ್ಕಪ್ಪ ಸೇವಾಪ್ರತಿನಿಧಿ ವಿಜಯಲಕ್ಸ್ಮಿ ಹಾಗೂ ಕಾಲೇಜಿನ ಪ್ರಾಚಾರ್ಯರು ವಿದ್ಯಾರ್ಥಿಗಳು ಹಾಜರಿದ್ದರು.