ವಿದ್ಯಾರ್ಥಿ ಜೀವನದ ನೆನಪುಗಳಿಗೆ ಸಾಕ್ಷಿಯಾದ ಸ್ನೇಹ ಸಮ್ಮಿಲನ
ಅಫಜಲಪುರ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಗುರುಭವನದಲ್ಲಿ 2003-04ನೇ ಸಾಲಿನ ಪಿಯುಸಿ ಹಳೆಯ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಸಂಭ್ರಮ ಹಾಗೂ ಆತ್ಮೀಯತೆಯಿಂದ ನಡೆಯಿತು.
22 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಸೇರಿದ್ದ ಹಳೆಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದ ಸವಿ ನೆನಪುಗಳನ್ನು ಮೆಲುಕು ಹಾಕಿ, ಗುರುಗಳಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಪೂಜ್ಯ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು, ಸ್ನೇಹ ಸಮ್ಮಿಲನವು ಕೇವಲ ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಕಾರ್ಯಕ್ರಮವಾಗಿರದೆ, ಸಮಾಜದ ಬಗ್ಗೆ ಜವಾಬ್ದಾರಿಯನ್ನು ಅರಿತು ಸಮಾಜಮುಖಿ ಕಾರ್ಯಗಳಿಗೆ ಮುನ್ನುಡಿ ಬರೆಯುವ ವೇದಿಕೆಯಾಗಬೇಕು ಎಂದು ಹೇಳಿದರು.
ತಂದೆ-ತಾಯಿಗಳ ನಂತರ ವ್ಯಕ್ತಿತ್ವ ರೂಪಿಸುವಲ್ಲಿ ಗುರುಗಳ ಪಾತ್ರ ಅತ್ಯಂತ ಮಹತ್ತರವಾಗಿದೆ. ತಾಯಿಯೇ ಮಗುವಿನ ಮೊದಲ ಗುರು. ತಾಯಿ-ತಂದೆಯರು ದೇವರಿಗಿಂತ ಶ್ರೇಷ್ಠರು. ಅವರ ಸಂಸ್ಕಾರ ಹಾಗೂ ಗುರುಗಳ ಮಾರ್ಗದರ್ಶನದಿಂದಲೇ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಶಿವಕುಮಾರ ನಾಟೀಕಾರ, 22 ವರ್ಷಗಳ ಬಳಿಕ ಎಲ್ಲ ಸ್ನೇಹಿತರು ಒಂದೇ ವೇದಿಕೆಯಲ್ಲಿ ಸೇರಿರುವುದು ಸಂತಸದ ಕ್ಷಣವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಗುರುಗಳು ನೀಡಿದ ಶಿಕ್ಷಣ, ಶಿಸ್ತು ಹಾಗೂ ಮೌಲ್ಯಗಳೇ ಇಂದು ಪ್ರತಿಯೊಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಉತ್ತಮ ಸ್ಥಾನಮಾನ ಗಳಿಸಲು ಕಾರಣವಾಗಿವೆ. ಗುರುಗಳ ಋಣವನ್ನು ಎಂದಿಗೂ ತೀರಿಸಲಾಗದು ಎಂದರು.
ಮುಂದಿನ ದಿನಗಳಲ್ಲಿ ಎಲ್ಲ ಸ್ನೇಹಿತರು ಸೇರಿ ‘ಸೋಶಿಯಲ್ ವೆಲ್ಫೇರ್ ಟ್ರಸ್ಟ್’ ಸ್ಥಾಪಿಸಿ ಶಿಕ್ಷಣ, ಆರೋಗ್ಯ, ಬಡ ವಿದ್ಯಾರ್ಥಿಗಳ ನೆರವು ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.
ಮುಖ್ಯ ಗುರುಗಳಾದ ಎಚ್.ಎಸ್. ಪಾಟೀಲ ಅವರು ಜ್ಯೋತಿ ಬೆಳಗಿಸಿದರು. . ಪಿಎಸ್ಐ ಸಂಗಮೇಶ ಅಂಗಡಿ ಅವರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ತಹಶೀಲ್ದಾರ್ ಸಂಜೀವಕುಮಾರ ದಾಸರ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಿವೃತ್ತ ಪ್ರಾಂಶುಪಾಲರು ಎಚ್.ಸಿ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಮಹಾನಂದ ಕಲಶೆಟ್ಟಿ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಶಾಂತಾ ಮೋಸಲಗಿ ಸ್ವಾಗತಿಸಿದರು. ಭೀಮಶಾ ಅಂಜುಟಗಿ ಹಾಗೂ ತ್ರಿವೇಣಿ ಬಣಗಾರ್ ಕಾರ್ಯಕ್ರಮ ನಿರೂಪಿಸಿದರು. ಅರುಣ ಚವ್ಹಾಣ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರೆ, ವಂದನಾರ್ಪಣೆ ಸಲ್ಲಿಸಿದರು.
ಅನಿಸಿಕೆ 1
22 ವರ್ಷಗಳ ಬಳಿಕ ಎಲ್ಲ ಸ್ನೇಹಿತರು ಮತ್ತು ನಮ್ಮನ್ನು ರೂಪಿಸಿದ ಗುರುಗಳನ್ನು ಒಂದೇ ವೇದಿಕೆಯಲ್ಲಿ ಭೇಟಿಯಾಗಿರುವುದು ತುಂಬಾ ಸಂತಸದ ಕ್ಷಣ. ವಿದ್ಯಾರ್ಥಿ ಜೀವನದ ನೆನಪುಗಳು ಮತ್ತೆ ಕಣ್ಮುಂದೆ ಬಂದವು. ಗುರುಗಳು ನೀಡಿದ ಶಿಕ್ಷಣ, ಶಿಸ್ತು ಮತ್ತು ಮೌಲ್ಯಗಳೇ ನಮ್ಮ ಇಂದಿನ ಬದುಕಿನ ಭದ್ರ ಅಡಿಪಾಯ. ಇಂತಹ ಸ್ನೇಹ ಸಮ್ಮಿಲನಗಳು ಕೇವಲ ನೆನಪುಗಳಿಗೆ ಸೀಮಿತವಾಗದೆ, ಸಮಾಜಸೇವೆಯ ಮೂಲಕ ನಮ್ಮ ಸ್ನೇಹವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬೇಕು ಎಂಬ ಆಶಯವಿದೆ.”
ಭರತ ಚಿಕ್ಕಳಗಿ( ಪಿ.ಯು.ಹಳೆ ವಿದ್ಯಾರ್ಥಿ ಅಳ್ಳಗಿ)
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಶಾಂತರಸ ಹೊಸಮನಿ, ಸಿದ್ದರಾಮ ಅಜಗೊಂಡ ಹಾಗೂ ಪ್ರಕಾಶ ಜಮಾದಾರ ಅವರನ್ನು ಹಳೆಯ ವಿದ್ಯಾರ್ಥಿಗಳ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಹಳೆಯ ವಿದ್ಯಾರ್ಥಿಗಳಾದ ಭರತ ಚಿಕ್ಕಳ್ಳಗಿ, ವಿನೋದ ರಾಠೋಡ, ನಾಗು ಅಳ್ಳಗಿ,ಸೈಬಣ್ಣ ಅಳ್ಳಗಿ ರಾಜು ಬಿರಾದಾರ, ರವಿ ಬಳುರ್ಗಿ, ಸಂದೀಪ ಪಾಟೀಲ, ಅಂಬರೀಷ್ ಪೋದ್ದಾರ್, ರಾಜು ಉಡಗಿ, ಭೀಮಾಶಂಕರ ಕರೀಗೌಡ, ಪೀರಪ್ಪ ಬಟಗೇರಿ, ಗುರು ಹಡಪದ, ಸೇರಿದಂತೆ ಅನೇಕರು ಭಾಗವಹಿಸಿ ವಿದ್ಯಾರ್ಥಿ ಜೀವನದ ನೆನಪುಗಳನ್ನು ಹಂಚಿಕೊಂಡು, ಸ್ನೇಹ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದರು.
.