ಭೀಮಾ ನದಿಗೆ 300 ಕ್ಯೂಸೆಕ್ನಂತೆ 14 ದಿನ ನೀರು ಹರಿಸಲು ಒಪ್ಪಿಗೆ; ರೈತರ ಧರಣಿ ಅಂತ್ಯ
ಅಫಜಲಪುರ: ತಾಲೂಕಿನ ಭೀಮಾ ನದಿಗೆ ಸಿಂದಗಿ ತಾಲೂಕಿನ ಬಳಗಾನೂರ ಕೆರೆಯಿಂದ 300 ಕ್ಯೂಸೆಕ್ನಂತೆ 14 ದಿನಗಳ ಕಾಲ ನೀರು ಹರಿಸಲು ಅಧಿಕಾರಿಗಳು ಒಪ್ಪಿಗೆ ಸೂಚಿಸಿ ನೀರು ಹರಿಸಿದ ಹಿನ್ನೆಲೆಯಲ್ಲಿ, ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಕಳೆದ ಎಂಟು ದಿನಗಳಿಂದ ಅಫಜಲಪುರ ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಬುಧವಾರ ಮದ್ಯಾಹ್ನ 3 ಗಂಟೆಗೆ ಅಂತ್ಯಗೊಳಿಸಲಾಯಿತು.
ಧರಣಿ ಮುಕ್ತಾಯಕ್ಕೂ ಮುನ್ನ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಮೂಲಕ ಶಾಸಕ ಎಂ.ವೈ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿ, ಅಫಜಲಪುರ ತಾಲೂಕಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು.
ಮನವಿಯಲ್ಲಿ, ಸೊನ್ನ ಬ್ಯಾರೇಜ್ನಲ್ಲಿ ಗರಿಷ್ಠ ಪ್ರಮಾಣದ ನೀರನ್ನು ಸಂಗ್ರಹಿಸಿ ಭೀಮಾ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನಿರಂತರವಾಗಿ ನೀರು ಹರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ, ಉಜನಿ ಜಲಾಶಯದಿಂದ ಕರ್ನಾಟಕದ ಪಾಲಿನ 15 ಟಿಎಂಸಿ ನೀರನ್ನು ಪ್ರತಿವರ್ಷ ಬಿಡುಗಡೆಗೊಳಿಸಲು ವಿಶೇಷ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಾಲೂಕಿನ ಕೆರೆಗಳ ಹೂಳು ತೆಗೆಯುವುದು, ಅಮರ್ಜಾ ಹಾಗೂ ಬೋರಿ ನದಿಗಳ ಪುನಶ್ಚೇತನ, ಅಗತ್ಯ ಸ್ಥಳಗಳಲ್ಲಿ ಬ್ಯಾರೇಜ್ಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸುವ ಮೂಲಕ ರೈತರಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮುಂಗಾರು ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಪರಿಗಣಿಸಿ ಅಫಜಲಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು, ಬೆಳೆ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಬೇಕು ಹಾಗೂ ರೈತರ ಸಾಲ ಮನ್ನಾಗೆ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಬಳಿಕ ಎಂಟನೇ ದಿನದ ಧರಣಿ ಸತ್ಯಾಗ್ರಹವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಿ, ಹೋರಾಟಕ್ಕೆ ಬೆಂಬಲ ಹಾಗೂ ಸಹಕಾರ ನೀಡಿದ ತಾಲೂಕಿನ ಜನತೆ, ವಿವಿಧ ಸಂಘಟನೆಗಳು, ರೈತರು ಹಾಗೂ ಸಾರ್ವಜನಿಕರಿಗೆ ರೈತ ಮುಖಂಡರು ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಮೇಶ್ ಶೆಟ್ಟಿ, ಚಂದ್ರಶೇಖರ ಕರಜಗಿ, ರಮೇಶ್ ಪಾಟೀಲ್, ಮುರುಗೇಂದ್ರ ಮಸಳಿ, ನೂರಅಹ್ಮದ್ ಭಾಗವಾನ್, ಶ್ರೀಮಂತ ಬಿರಾದಾರ, ಲತೀಫ್ ಪಟೇಲ್, ಭೀಮರಾಯ ಗೌರ, ಬಸವರಾಜ ಶಿರ್, ನಾಮದೇವ ಕಡಕೋಳ, ಪ್ರಭಾವತಿ ಮೇತ್ರಿ, ಆನಂದ ಪಾಟೀಲ್, ಈರಣ್ಣ ದೊಡ್ಡಮನಿ, ಕಲ್ಲು ಅಂಜುಟಗಿ, ದತ್ತುಗುರು ಬಿದನೂರ, ದತ್ತುಗೌಡ ಪಾಟೀಲ್, ಗುರು ಹುಲ್ಲೂರು, ಅಣ್ಣರಾಯ ಪಾಟೀಲ್, ಪ್ರಭಾವತಿ ಮೇತ್ರೆ, ಶಾಂತಮಲ್ಲಪ್ಪ ಹೊನ್ನುಂಗುರ, ಸುರೇಶಗೌಡ ಪಾಟೀಲ್, ಗುರು ಚಾಂದಕವಟೆ, ಶಿವಪುತ್ರ ಬುರಲಿ, ಬಸು ವಾಳಿ, ಬಸಯ್ಯ ಸಾಲಿಮಠ, ರಾಜು ಬಡದಾಳ ಸೇರಿದಂತೆ ಅನೇಕ ರೈತ ಮುಖಂಡರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
.