ದೇಶಕ್ಕೆ ಜಗಜೀವನ್ ರಾಮ್ ಕೊಡುಗೆ ಅಪಾರ-ಸಂತೋಷ ಬಂಡೆ
ಇಂಡಿ: ಸ್ವಾತಂತ್ರ್ಯ ಹೋರಾಟಗಾರರಾಗಿ, ನವಭಾರತದ ನಿರ್ಮಾತೃವಾಗಿ ಬಾಬು ಜಗಜೀವನ್ ರಾಮ್ ಅವರು ಕಾರ್ಮಿಕ ಕಲ್ಯಾಣ, ಕೃಷಿ ಅಭಿವೃದ್ಧಿ, ರಕ್ಷಣೆ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸಲ್ಲಿಸಿರುವ ಸೇವೆ ಇತಿಹಾಸದ ಪುಟಗಳಲ್ಲಿ ಅಜರಾಮರ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಸೋಮವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ಹಮ್ಮಿಕೊಂಡ ಡಾ. ಬಾಬು ಜಗಜೀವನ್ ರಾಮ್ ಅವರ 40 ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಹಾರ ಮತ್ತು ಕೃಷಿ ಸಚಿವರಾಗಿ, ಆಹಾರ ಕೊರತೆಯಲ್ಲಿದ್ದ ಭಾರತವನ್ನು ಸ್ವಾವಲಂಬನೆಯತ್ತ ಕೊಂಡೊಯ್ದು ಹಸಿರು ಕ್ರಾಂತಿಗೆ ಬಲವಾದ ಅಡಿಪಾಯ ಹಾಕಿದರು. ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವಲ್ಲಿ ಬಾಬೂಜಿ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಕೆ ಐ ಮಕಾನದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಬೂಜಿ ಅವರು ಮೇಲುಕೀಳೆಂಬ ತಾರತಮ್ಯ, ಜಾತಿ ವ್ಯವಸ್ಥೆಯನ್ನು ತೊಡೆದುಹಾಕಿ ಎಲ್ಲರಲ್ಲೂ ಸಮಾನತೆ ತರುವುದು ಅವರ ಉದ್ದೇಶವಾಗಿತ್ತು. ಶೋಷಿತರ ಪರವಾಗಿ ದನಿ ಎತ್ತಿದ ಅವರ ಚಿಂತನೆಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರಾದ ಎಸ್ ಎಸ್ ಅರಬ, ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕ ಅಫ್ತಾಬ್ ಮುಲ್ಲಾ ಸೇರಿದಂತೆ ಮಕ್ಕಳು ಹಾಜರಿದ್ದರು.

















