ಕಸಾಪ ಕನ್ನಡ ನಾಡಿನ ಅಸ್ಮಿತೆಯ ಪ್ರತೀಕ-ಸಂತೋಷ ಬಂಡೆ
ವಿಜಯಪುರ: ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾದ ಕನ್ನಡ ಸಾಹಿತ್ಯ ಪರಿಷತ್, ಕನ್ನಡ ನಾಡು-ನುಡಿಯ ಸಂರಕ್ಷಣೆ ಮತ್ತು ಭಾಷೆಗಾಗಿ ಶ್ರಮಿಸಲು ಕಟ್ಟಿರುವ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಇದು ಕನ್ನಡಿಗರ ಜೀವನಾಡಿಯಾಗಿದೆ ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.
ಮಂಗಳವಾರ ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ೧೧೨ ನೇ ಸಂಸ್ಥಾಪನಾ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಸಾಪ ಎಂಬುದು ಕನ್ನಡ, ಸಾಹಿತ್ಯ ಮತ್ತು ಜನತೆಯ ಹದವರಿತ ಸಂಗಮ. ಅದು ಕನ್ನಡಿಗರ ಪಾಲಿಗೆ ಮೂರಕ್ಷರದ ಗಾಯತ್ರಿ ಮಂತ್ರವಿದ್ದಂತೆ. ಕನ್ನಡ ಸಾಹಿತ್ಯವನ್ನು ಜನ ಸಾಮಾನ್ಯರು ಅರಿಯುವಂತೆ ಮಾಡುವಲ್ಲಿ ಸಾಹಿತ್ಯ ಪರಿಷತ್ ಸೇವೆ ಅನನ್ಯ ಎಂದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಜತೆಗೆ ಸಂಸ್ಥಾನದಲ್ಲಿ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆಗೆ ಹೆಚ್ಚಿನ ಶ್ರಮ ವಹಿಸಿದ್ದಾರೆ ಎಂದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿ
ಮಾತನಾಡಿ,1915 ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಈಗ ಕನ್ನಡಿಗರ ಹೆಮ್ಮೆಯಾಗಿ ಹೊರಹೊಮ್ಮಿದೆ. ಭಾಷೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟು, ಸಾಹಿತ್ಯಿಕವಾಗಿ
ತಮ್ಮ ಅಮೂಲ್ಯ ಕೊಡುಗೆ ನೀಡಿದ ನೂರಾರು ಕವಿ,ಸಾಹಿತಿ, ಚಿಂತಕರ ಸೇವೆ ನಮಗೆಲ್ಲರಿಗೂ ಪ್ರೇರಣೆ ಆಗಿದೆ ಎಂದು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ,ಶಿಕ್ಷಕ ರಾದ ರೇಣುಕಾ ಭಜಂತ್ರಿ, ಸಂಗೀತಾ ಅಂಕಲಗಿ, ವೀರೇಶ
ಹುಣಶ್ಯಾಳ ಹಾಗೂ ಪಾಲಕರು,ಮಕ್ಕಳು ಭಾಗವಹಿಸಿದ್ದರು.



















