ವಿಜಯಪುರ ಮಾದರಿ ನಗರವಾಗಿ ಅಭಿವೃದ್ಧಿ; ಶಾಸಕ ಯತ್ನಾಳ
ವಿಜಯಪುರ: 2018 ರಲ್ಲಿ ನನ್ನನ್ನು ಶಾಸಕನನ್ನಾಗಿ ಮಾಡಿದರ ಪ್ರತಿಫಲವಾಗಿ ರಾಜ್ಯದಲ್ಲಿಯೇ ವಿಜಯಪುರ ಮಾದರಿ ನಗರವಾಗಿ ಅಭಿವೃದ್ಧಿ ಆಗಲು ಸಾಧ್ಯವಾಯಿತು. ರಾಜ್ಯದ ಮುಖ್ಯಮಂತ್ರಿ ಆಗಲು ಆಶೀರ್ವದಿಸಿದರೆ, ಇಡೀ ರಾಜ್ಯದ ಚಿತ್ರಣವನ್ನೇ ಬದಲಿಸುವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ನಗರದ ವಾರ್ಡ್ ನಂ.32 ರಲ್ಲಿ ಬರುವ ಜೋರಾಪುರ ಪೇಠ ದುರ್ಗಾದೇವಿ ದೇವಸ್ಥಾನದ ಹತ್ತಿರ ಸನ್ 2025-26ನೇ ಸಾಲಿನ ಮಾನ್ಯ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ.20 ಲಕ್ಷ ಮತ್ತು ಧಾರ್ಮಿಕ ದತ್ತಿ ಇಲಾಖೆ ಯಿಂದ ಮಂಜೂರಿಸಲಾದ ರೂ.10 ಲಕ್ಷ ಸೇರಿ ಒಟ್ಟು ರೂ.30 ಲಕ್ಷ ಅನುದಾನದಲ್ಲಿ ಸಮುದಾಯ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ದೂಳಾಪುರವಾಗಿದ್ದ ವಿಜಯಪುರ ನಗರದಲ್ಲಿ ಸುಸಜ್ಜಿತ ಸಿಸಿ ರಸ್ತೆಗಳು, ಒಳಚರಂಡಿ ನಿರ್ಮಾಣ, ಉದ್ಯಾನವನಗಳ ಅಭಿವೃದ್ಧಿ, ರಸ್ತೆ ಮಹಾಪುರುಷರ ಹೆಸರು ನಾಮಕರಣ, ವೃತ್ತಗಳ ನಿರ್ಮಾಣ, ಕಾಯಿಪಲ್ಲೆ ಮಾರುಕಟ್ಟೆ, ದೇವಸ್ಥಾನಗಳು ಜೀರ್ಣೋದ್ಧಾರ, ಸಮುದಾಯ ಭವನಗಳ ನಿರ್ಮಾಣ, ಶಾಲಾ ಕೊಠಡಿಗಳು ಹೀಗೆ ಹತ್ತಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಅತ್ಯಂತ ಶುದ್ಧ ಗಾಳಿ ಬಿಸುವ ಮತ್ತು ಮಾದರಿ ನಗರವಾಗಿ ರೂಪುಗೊಳ್ಳಲು ಸಾಧ್ಯವಾಗಿದೆ ಎಂದರು.
ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಿವಾಜಿ ವೃತ್ತದಿಂದ ಡಾ.ಬಾಬು ಜಗಜೀವನರಾಮ ವೃತ್ತದವರೆಗೆ ಶೀಘ್ರದಲ್ಲೇ ರಸ್ತೆಯನ್ನು ಅಗಲೀಕರಣಗೊಳಿಸಿ, ಅನುಷ್ಠಾನಗೊಳಿಸಲು ಅಗತ್ಯವಿರುವ ರೂ.32 ಕೋಟಿ ಅನುದಾನವನ್ನು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ಸದರಿ ರಸ್ತೆ ಆಗಲೀಕರಣದಲ್ಲಿ ಬರುವ ಖಾಸಗಿ ಒಡೆತನದ ಆಸ್ತಿಗಳಿಗೆ ಪರಿಹಾರ ನೀಡಿಯೇ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಲು ಮತ್ತಿತರೆ ಕೆಲಸಗಳಿಗಾಗಿ ವಿನಾಕಾರಣ ವಿಳಂಬ ಮಾಡಿದರೆ, ಲಂಚ ಕೇಳಿದರೆ ನನ್ನ ವಾಟ್ಸಪ್ ನಂಬರಿಗೆ ಮಾಹಿತಿ ನೀಡಿ, ತಕ್ಷಣ ಸಂಬಂಧಿಸಿದ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿದರು. ಪಾಲಿಕೆ ಸದಸ್ಯ ರಾಹುಲ್ ಜಾಧವ ಸೇರಿದಂತೆ ಮುಖಂಡರು, ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.


















