ಖಿಲಾರಹಟ್ಟಿಯಲ್ಲಿ ಮಾರ್ಚ್ 20 ರಿಂದ ಬೀರಲಿಂಗೇಶ್ವರ ಹಾಗೂ ಕಾಡಸಿದ್ಧೇಶ್ವರ ಜಾತ್ರಾ ಮಹೋತ್ಸವ
21 ರಂದು ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆ ಕಾರ್ಯಕ್ರಮ
ಮುದ್ದೇಬಿಹಾಳ: ತಾಲ್ಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಖಿಲಾರಹಟ್ಟಿ ಗ್ರಾಮದ ಆರಾಧ್ಯ ದೈವಗಳಾದ ಶ್ರೀ ಬೀರಲಿಂಗೇಶ್ವರ ಹಾಗೂ ಶ್ರೀ ಕಾಡಸಿದ್ಧೇಶ್ವರ ಜಾತ್ರಾ ಮಹೋತ್ಸವವು ಮಾರ್ಚ್ 20 ರಿಂದ 22 ರವರೆಗೆ ಮೂರು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಸಮಾಜ ಸೇವಕ ಹಾಗೂ ಅಹಲ್ಯಾಬಾಯಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ತಿಳಿಸಿದರು.
ಪಟ್ಟಣದ ಅಹಲ್ಯಾಬಾಯಿ ಹೋಳ್ಕರ್ ಬ್ಯಾಂಕ್‌ನ ಪಲ್ಲವಿ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಕಾರ್ಯಕ್ರಮದ ವಿವರಗಳನ್ನು ಹಂಚಿಕೊಂಡರು.
21 ವರ್ಷಗಳ ಸೇವಾ ಪರಂಪರೆ
”ಕಳೆದ 21 ವರ್ಷಗಳಿಂದ ಸುರಪುರ ತಾಲ್ಲೂಕಿನ ಮಾರನಾಳದ ನಮ್ಮ ಮನೆದೇವರಾದ ಭೀರಪ್ಪ ದೇವಸ್ಥಾನದಿಂದ ಸಾಮೂಹಿಕ ವಿವಾಹಗಳನ್ನು ಆರಂಭಿಸಿದ್ದು, ಈಗಲೂ ಅದನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.
ಯುಗಾದಿ ಹಬ್ಬದ ನಿಮಿತ್ತ ತಾಲೂಕಿನ ವಿವಿಧ ಗ್ರಾಮದ ಕೂಲಿ ಕಾರ್ಮಿಕರ ಹಾಗೂ ಬಡವರ ಅನುಕೂಲಕ್ಕಾಗಿ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 21 ಜೋಡಿಗಳು ನೋಂದಾಯಿಸಿಕೊಂಡಿವೆ,” ಎಂದು ಮದರಿ ವಿವರಿಸಿದರು.
ಗ್ರಾಮದಲ್ಲಿ ಶನಿವಾರ ಮಾರ್ಚ್ 21ರಂದು ೧೨-೦೦ ಗಂಟೆಗೆ ಉಚಿತ ಸಾಮೂಹಿಕ ವಿವಾಹ ಹಾಗೂ ಧರ್ಮ ಸಭೆಯ ಮುಖ್ಯ ಕಾರ್ಯಕ್ರಮಗಳು ನಡೆಯಲಿದ್ದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಮುದ್ದೇಬಿಹಾಳ ಶಾಸಕರಾದ ಮಾನ್ಯ ಸಿ.ಎಸ್. ನಾಡಗೌಡ (ಅಪ್ಪಾಜಿ) ಅವರು ಜಾತ್ರಾ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ), ವಿಜಯಪುರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಗಂಗಾಧರ್ ಎಸ್. ನಾಡಗೌಡರ (ಮುನ್ನಾಧಣಿ) ಹಾಗೂ ಕಾಂಗ್ರೆಸ್ ಧುರೀಣ ಶಾಂತಗೌಡ ಎಸ್. ಪಾಟೀಲ (ನಡಹಳ್ಳಿ) ಅವರು ಜ್ಯೋತಿ ಬೆಳಗಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಅಲ್ಯಾದೇವಿ ಹೋಲ್ಕರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್.ಎಸ್. ಪೂಜಾರಿ ವಹಿಸಲಿದ್ದಾರೆ.
ದಿವ್ಯ ಸಾನಿಧ್ಯ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಆಗತೀರ್ಥ ಶ್ರೀ ರೇವಣಸಿದ್ದೇಶ್ವರ ಶಾಂತಮಯ ಮಹಾಸ್ವಾಮೀಜಿ,ಅಂಕಲಿಮಠದ ಶ್ರೀ ವೀರಭದ್ರ ಮಹಾಸ್ವಾಮೀಜಿ, ಸಿದ್ದನಕೊಳ್ಳದ ಶ್ರೀ ಶಿವಕುಮಾರ ಮಹಾಸ್ವಾಮಿಗಳು,ತಾಳಿಕೋಟೆ ಖಾಸಗತೇಶ್ವರ ಮಠದ ಶ್ರೀ ಬಾಲ ಶಿವಯೋಗಿ ಸಿದ್ದಲಿಂಗ ದೇವರು, ಜೊತೆಗೆ ಯರಝರಿ, ಸರೂರು, ಖಿಲಾರಹಟ್ಟಿ, ಸಿದ್ದಾಪುರ ಹಾಗೂ ಇತರ ಕ್ಷೇತ್ರಗಳ ಶ್ರೀಗಳು ಉಪಸ್ಥಿತರಿರಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಯ್.ಎಚ್. ವಿಜಯಕರ್ ಅವರು, ಮಲ್ಲಿಕಾರ್ಜುನ ಮದರಿ ಅವರ 21 ವರ್ಷಗಳ ನಿರಂತರ ಸಾಮಾಜಿಕ ಸೇವೆಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವಾಯ್ ಎಚ್ ವಿಜಯಕರ, ಮಲ್ಲಣ್ಣ ಕೆಶರಟ್ಟಿ, ಮಾಜಿ ಜಿಪಂ ಸದಸ್ಯ ಬಿ.ಎಸ್. ಶಿರೋಳ,ಸಂಸ್ಥೆ ಹಣಕಾಸು ಅಧಿಕಾರಿ ಬಸವರಾಜ ಬಿಜ್ಜೂರ, ಶಿಶಿ ನೆರಬೆಂಚಿ, ಬಸವರಾಜ ಗುಡ್ಲಲಮನಿ, ಚಂದ್ರು ಜೋಗಿ,ಚಂದ್ರು ಗಣಾಚಾರಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ.