ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ಪ್ರದಾನ
ಮುದ್ದೇಬಿಹಾಳ: ರಾಯಚೂರಿನ ಸಿದ್ದರಾಮ ಜಮ್ಮಲದಿನ್ನಿ ಕಲ್ಯಾಣ ಮಂಟಪದಲ್ಲಿ ಇತ್ತೀಚೆಗೆ ನಡೆದ ಮಾತೋಶ್ರೀ ಮಹಾಂತಮ್ಮ ಶಿವಬಸ್ಸಪ್ಪ ಗೋನಾಳ ಪ್ರತಿಷ್ಠಾನ ಹಾಗೂ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ 16ನೇ ವಾರ್ಷಿಕೋತ್ಸವದ ಅಂಗವಾಗಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷ ಹಾಗೂ ಪತ್ರಕರ್ತ ಪುಂಡಲೀಕ ಮುರಾಳ ಅವರಿಗೆ ರಾಜ್ಯ ಮಟ್ಟದ ‘ಮಹಾಂತಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾಜ ಸೇವೆ ಮತ್ತು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಗಣನೀಯ ಸೇವೆಯನ್ನು ಗುರುತಿಸಿ ಪ್ರತಿಷ್ಠಾನವು ಈ ಗೌರವವನ್ನು ಸಮರ್ಪಿಸಿದೆ.
ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿ. ಸೋಮಶೇಖರ್, ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್. ಬಾಲಾಜಿ, ಖ್ಯಾತ ಜಾನಪದ ಕಲಾವಿದ ಅಪ್ಪಿಗೆರೆ ತಿಮ್ಮರಾಜು, ರಾಜ್ಯ ಮಾಹಿತಿ ಆಯೋಗದ ಆಯುಕ್ತ ಬಿ. ವೆಂಕಟ್‌ಸಿಂಗ್, ಪ್ರತಿಷ್ಠಾನದ ಶರಣಪ್ಪ ಗೋನಾಳ್ ಸೇರಿದಂತೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದ ಪ್ರಮುಖರು ಉಪಸ್ಥಿತರಿದ್ದರು.
ಪತ್ರಿಕೋದ್ಯಮದ ಜೊತೆಗೆ ಯುವ ಸಂಘಟನೆಗಳ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಪುಂಡಲೀಕ ಮುರಾಳ ಅವರಿಗೆ ಜಿಲ್ಲೆಯ ಗಣ್ಯರು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.