ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳೇ, ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ: ಎ.ಸಿ. ಕೆರೂರ ಕರೆ
ಮುದ್ದೇಬಿಹಾಳ:ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಂದರೆ ಭಯ ಪಡುವ ಅಗತ್ಯವಿಲ್ಲ. ವರ್ಷವಿಡೀ ಶಾಲೆಯಲ್ಲಿ ನಡೆದ ಕಲಿಕೆ ಮತ್ತು ಪರೀಕ್ಷೆಗಳ ಅನುಭವದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಒಂದು ಹಬ್ಬದಂತೆ ಸಂಭ್ರಮದಿಂದ ಎದುರಿಸಬೇಕು,” ಎಂದು ತಾಲೂಕಿನ ಸರಕಾರಿ ಗ್ರೇಡ್-1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಎ.ಸಿ. ಕೆರೂರ ಅವರು ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದ್ದಾರೆ.
ಪರೀಕ್ಷಾ ಪೂರ್ವ ಸಿದ್ಧತೆ ಮತ್ತು ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗತಿಯ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯಾರ್ಥಿಗಳಿಗೆ ಹಲವು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ.
ಭಯ ಬೇಡ, ಆತ್ಮವಿಶ್ವಾಸವಿರಲಿ: ಜೂನ್ ತಿಂಗಳಿನಿಂದ ಮಾರ್ಚ್‌ವರೆಗೆ ಶಾಲೆಯಲ್ಲಿ ಸೇತುಬಂಧ, ಘಟಕ ಪರೀಕ್ಷೆಗಳು, ರೂಪನಾತ್ಮಕ ಹಾಗೂ ಸಂಕಲನಾತ್ಮಕ ಪರೀಕ್ಷೆಗಳು ಸೇರಿದಂತೆ ಸುಮಾರು 30 ರಿಂದ 40 ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಈಗಾಗಲೇ ಎದುರಿಸಿದ್ದಾರೆ. ಹೀಗಾಗಿ ಪರೀಕ್ಷೆ ಎಂಬುದು ಹೊಸದೇನಲ್ಲ, ಅದು ಕೇವಲ ಮುಂದಿನ ಹಂತಕ್ಕೆ ಹೋಗುವ ಮಾನದಂಡವಷ್ಟೇ ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರಮುಖ ಸಲಹೆಗಳು:
ಆರೋಗ್ಯದ ಕಡೆ ಗಮನ: ಪರೀಕ್ಷಾ ದಿನಗಳಲ್ಲಿ ಲಘು ಆಹಾರ ಸೇವಿಸಿ, ಆರೋಗ್ಯ ಕಾಪಾಡಿಕೊಳ್ಳಿ.
ವೇಳಾಪಟ್ಟಿ ಪಾಲನೆ: ಮನೆಯಲ್ಲಿ ಪ್ರತಿ ವಿಷಯಕ್ಕೆ ಕನಿಷ್ಠ ಒಂದರಿಂದ ಒಂದೂವರೆ ಗಂಟೆ ಮೀಸಲಿಟ್ಟು ವೇಳಾಪಟ್ಟಿಯಂತೆ ಅಭ್ಯಾಸ ಮಾಡಿ.
ಒತ್ತಡ ಮುಕ್ತ ಓದು: ಬೇಗ ಮಲಗಿ, ಮುಂಜಾನೆ ಬೇಗ ಎದ್ದು ಪ್ರಶಾಂತ ವಾತಾವರಣದಲ್ಲಿ ಅಧ್ಯಯನ ಮಾಡಿ.
ಗೊಂದಲ ಬೇಡ: ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ತಲುಪಿ. ಸ್ನೇಹಿತರೊಂದಿಗೆ ಅನಗತ್ಯ ಚರ್ಚೆ ನಡೆಸಿ ಗೊಂದಲಕ್ಕೊಳಗಾಗಬೇಡಿ.
ಉತ್ತರ ಪತ್ರಿಕೆ ನಿರ್ವಹಣೆ: ಪ್ರಶ್ನೆ ಪತ್ರಿಕೆಯನ್ನು ಶಾಂತಚಿತ್ತದಿಂದ ಓದಿ, ಮೊದಲು ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸಿ. ಉತ್ತರ ಪತ್ರಿಕೆಯಲ್ಲಿ ಸ್ವಚ್ಛತೆ ಇರಲಿ, ಅಕ್ಷರಗಳು ಸ್ಪಷ್ಟವಾಗಿರಲಿ.
ಚರ್ಚೆ ಮಾಡಬೇಡಿ: ”ಒಂದು ಪರೀಕ್ಷೆ ಮುಗಿದ ನಂತರ ಆ ಪತ್ರಿಕೆಯ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸಬೇಡಿ. ಸಣ್ಣ ತಪ್ಪುಗಳಾಗಿದ್ದರೂ ಅದು ಮುಂದಿನ ಪರೀಕ್ಷೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಪರೀಕ್ಷೆ ಮುಗಿದ ಕೂಡಲೇ ಮುಂದಿನ ವಿಷಯದ ಕಡೆಗೆ ಗಮನ ಹರಿಸಿ,” ಎಂದು ಅವರು ಕಿವಿಮಾತು ಹೇಳಿದ್ದಾರೆ.
ಶಿಕ್ಷಕರು ನೀಡಿದ ಮಾರ್ಗದರ್ಶನ ಹಾಗೂ ಪರೀಕ್ಷಾ ಮಾದರಿಗಳನ್ನು ಸರಿಯಾಗಿ ಅಳವಡಿಸಿಕೊಂಡರೆ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ಫಲಿತಾಂಶದೊಂದಿಗೆ ಯಶಸ್ಸು ಕಾಣಲು ಸಾಧ್ಯ ಎಂದು ಕೆರೂರ ಅವರು ಹಾರೈಸಿದ್ದಾರೆ.