ಮುದ್ದೇಬಿಹಾಳ: ಚಿನ್ಮಯ ಜೆಸಿ ಶಾಲೆಯಿಂದ ಪ್ರತಿಭಾ ಪುರಸ್ಕಾರ ಪರೀಕ್ಷೆ; ವಿಜೇತರಿಗೆ ಉಚಿತ ಶಿಕ್ಷಣದ ಬಂಪರ್ ಆಫರ್.
ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್- ಸ್ಪರ್ಧಾತ್ಮಕ ಪರೀಕ್ಷೆ
ಮುದ್ದೇಬಿಹಾಳ: ಪಟ್ಟಣದ ವಿದ್ಯಾನಗರದ ಶಿರವಾಳ ಲೇಔಟ್‌ನಲ್ಲಿರುವ ಪ್ರಗತಿ ಜೆಸಿ ಶಿಕ್ಷಣ ಸಂಸ್ಥೆಯಡಿ ನಡೆಯುತ್ತಿರುವ ಚಿನ್ಮಯ ಜೆಸಿ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ‘ಚಿನ್ಮಯ ಜೆಸಿ ಟ್ಯಾಲೆಂಟ್ ಅವಾರ್ಡ್-2026-27’ ಸ್ಪರ್ಧಾತ್ಮಕ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಡಾ. ವೀರೇಶ ಪಾಟೀಲ ತಿಳಿಸಿದರು.
ಗುರುವಾರ ಶಾಲಾ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, 4ನೇ ತರಗತಿಯಿಂದ 9ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಈ ವಿಶೇಷ ಪರೀಕ್ಷೆ ಆಯೋಜಿಸಲಾಗಿದೆ. ಮಾರ್ಚ್ 15ರಂದು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 12:30 ರವರೆಗೆ ಪರೀಕ್ಷೆ ನಡೆಯಲಿದ್ದು, ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಮಾರ್ಚ್ 14ರೊಳಗೆ ಹೆಸರು ನೋಂದಾಯಿಸಿಕೊಳ್ಳಲು ಕೋರಿದ್ದಾರೆ.
ಪ್ರತಿಭಾನ್ವಿತರಿಗೆ ಆಕರ್ಷಕ ರಿಯಾಯಿತಿ:
ಪರೀಕ್ಷೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಭರ್ಜರಿ ಕೊಡುಗೆಗಳನ್ನು ಘೋಷಿಸಲಾಗಿದೆ:
ಪ್ರಥಮ ಸ್ಥಾನ: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಒಂದು ವರ್ಷದ ಸಂಪೂರ್ಣ ಉಚಿತ ಶಿಕ್ಷಣ.
ದ್ವಿತೀಯ ಸ್ಥಾನ: ಶಾಲಾ ಶುಲ್ಕದಲ್ಲಿ ಶೇ. 50ರಷ್ಟು ರಿಯಾಯಿತಿ. ತೃತೀಯ ಸ್ಥಾನ: ಶಾಲಾ ಶುಲ್ಕದಲ್ಲಿ ಶೇ. 25ರಷ್ಟು ರಿಯಾಯಿತಿ. 4, 5 ಮತ್ತು 6ನೇ ಸ್ಥಾನ: ಕ್ರಮವಾಗಿ 2000 ರೂ., 1000 ರೂ. ಹಾಗೂ 500 ರೂ. ನಗದು ಬಹುಮಾನ ನೀಡಲಾಗುವುದು.
ಸಂಸ್ಥೆಯ ನಿರ್ದೇಶಕ ಸತೀಶ ಓಸ್ವಾಲ್ ಮಾತನಾಡಿ, “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಭಾಗದ ಮಕ್ಕಳು ಪೈಪೋಟಿ ನಡೆಸಲು ಸಜ್ಜಾಗಬೇಕು. ಈ ಉದ್ದೇಶದಿಂದಲೇ ಸಾರ್ವಜನಿಕವಾಗಿ ಈ ಪರೀಕ್ಷೆ ಆಯೋಜಿಸಿದ್ದೇವೆ. ಕಳೆದ ಹತ್ತು ವರ್ಷಗಳಿಂದ ನಮ್ಮ ಸಂಸ್ಥೆಯು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ದಾಖಲಿಸುತ್ತಾ ಬಂದಿದೆ” ಎಂದು ಹೆಮ್ಮೆಯಿಂದ ಹೇಳಿದರು.
ಪರೀಕ್ಷೆಯ ಸ್ವರೂಪ: ಮುಖ್ಯಗುರುಗಳಾದ ಆನಂದ ಓಗಿ ಮಾಹಿತಿ ನೀಡಿ, “ಪರೀಕ್ಷೆಯು ಒಟ್ಟು 60 ಅಂಕಗಳದ್ದಾಗಿರುತ್ತದೆ. ಇಂಗ್ಲಿಷ್, ಗಣಿತ, ವಿಜ್ಞಾನ, ಮಾನಸಿಕ ಸಾಮರ್ಥ್ಯ ಹಾಗೂ ಸಾಮಾನ್ಯ ಜ್ಞಾನದ ಪ್ರಶ್ನೆಗಳಿರಲಿವೆ. ಪ್ರತಿ ಸರಿ ಉತ್ತರಕ್ಕೆ 4 ಅಂಕಗಳಿದ್ದು, ತಪ್ಪು ಉತ್ತರಕ್ಕೆ 1 ಅಂಕ ಕಡಿತಗೊಳಿಸುವ (Negative Marking) ವ್ಯವಸ್ಥೆ ಇರುತ್ತದೆ” ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀನಿವಾಸ ಇಲ್ಲೂರ, ಪ್ರಭುದೇವ ಕಲ್ಬುರ್ಗಿ, ನೀಲಕಂಠರಾವ ನಾಡಗೌಡ್ರ, ಮುರಳೀಕೃಷ್ಣ ಬುದ್ದೋಡಿ, ರವಿ ತಡಸದ, ಸುನೀಲ ಇಲ್ಲೂರ, ವಿಲಾಸರಾವ ದೇಶಪಾಂಡೆ ಹಾಗೂ ಮುಖ್ಯಗುರುಮಾತೆ ಸಿಸ್ಟರ್ ಸ್ಟೆಲ್ಲಾ ,ಮುಖ್ಯಗುರುಗಳ ಆನಂದ ಹುಗಾರ, ಶಾಲೆ ಶಿಕ್ಷಕರು ಸೇರಿದಂತೆ ಉಪಸ್ಥಿತರಿದ್ದರು.
ಹೆಸರು ನೋಂದಾಯಿಸಲು ಸಂಪರ್ಕಿಸಿ: 9481748268, 9731173194, 9448302128, 9449154555. ಎಂದು ತಿಳಿಸಿದ್ದಾರೆ.