ರಂಜಾನ್ ಸೌಹಾರ್ದತೆಯನ್ನು ಬೆಸೆಯುವ ಹಬ್ಬ: ಸಿ.ಬಿ. ಅಸ್ಕಿ ಅಭಿಮತ
ಮುದ್ದೇಬಿಹಾಳ: “ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತದಲ್ಲಿ ಹಿಂದೂ-ಮುಸ್ಲಿಂ ಬಾಂಧವರ ಮಧ್ಯೆ ಪ್ರೀತಿ ಮತ್ತು ಸೌಹಾರ್ದತೆಯನ್ನು ಬೆಸೆಯುವ ಶಕ್ತಿ ರಂಜಾನ್ ಹಬ್ಬಕ್ಕಿದೆ,” ಎಂದು ಅಸ್ಕಿ ಫೌಂಡೇಶನ್ ಕೊಣ್ಣೂರ ಹಾಗೂ ಕಾಂಗ್ರೆಸ್ ಮುಖಂಡ ಅಧ್ಯಕ್ಷ ಸಿ.ಬಿ. ಅಸ್ಕಿ ಹೇಳಿದರು.
ಪಟ್ಟಣದ ಮಹೆಬೂಬ ನಗರದ ಮಕ್ಕಾ ಮಸೀದಿಯಲ್ಲಿ ಮುಸ್ಲಿಂ ಬಾಂಧವರು ಸಂಜೆ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಮಾನವೀಯತೆಯ ಸಂದೇಶ”ಅಸ್ಕಿ ಫೌಂಡೇಶನ್ ಕೊಣ್ಣೂರ ವತಿಯಿಂದ ಈ ಬಾರಿ ಕ್ಷೇತ್ರದ ಎಂಟು ಪ್ರಮುಖ ಕೇಂದ್ರಗಳಲ್ಲಿ ಇಫ್ತಾರ್ ಕೂಟಗಳನ್ನು ಆಯೋಜಿಸಲಾಗುತ್ತಿದೆ. ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರು ಶಾಂತಿ ಮತ್ತು ಮಾನವೀಯತೆಯ ಸಂದೇಶ ನೀಡಿದ್ದಾರೆ. ಹಸಿವಿನಿಂದ ಬಳಲುತ್ತಿರುವವರ ಎದುರು ಹೊಟ್ಟೆತುಂಬ ಉಣ್ಣುವವನನ್ನು ದೇವರು ಮೆಚ್ಚುವುದಿಲ್ಲ ಎಂಬ ಅವರ ಮಾತು ನಮಗೆ ಆದರ್ಶವಾಗಬೇಕು. ನೆರೆಹೊರೆಯವರೊಂದಿಗೆ ಸ್ನೇಹಪರತೆಯಿಂದ ಬದುಕಬೇಕೆಂದು ಪವಿತ್ರ ಖುರಾನ್ ಬೋಧಿಸುತ್ತದೆ,” ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ವಾಯ್.ಎಚ್. ವಿಜಯಕರ್ ಮಾತನಾಡಿ, “ಹಬ್ಬಗಳು ಮನುಷ್ಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತವೆ. ಅಸ್ಕಿ ಫೌಂಡೇಶನ್ ಸಾಮಾಜಿಕ ಮತ್ತು ಧಾರ್ಮಿಕ ಏಕತೆಗಾಗಿ ಮಾಡುತ್ತಿರುವ ಇಂತಹ ಕಾರ್ಯಗಳು ನಿಜಕ್ಕೂ ಶ್ಲಾಘನೀಯ,” ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಸತೀಶ ಓಸ್ವಾಲ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಪುರಸಭೆ ನಿಕಟ ಪೂರ್ವ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಅಶೋಕ ಚಟ್ಟೇರ, ರಾಜು ಕರಡ್ಡಿ, ಜಬ್ಬಾರ ಗೋಲಂದಾಜ, ಹುಸೇನ್ ಮುಲ್ಲಾ, ಸದ್ದಾಂ ಕುಂಟೋಜಿ, ಬಾಬಾಪಟೇಲ್ ಬಿರಾದಾರ, ಸಿಕಂದರ್ ಜಾನ್ವೇಕರ,ಗುಲಾಮೊಹ್ಮದ ದಫೇದಾರ, ಜೆ.ಡಿ.ಮುಲ್ಲಾ , ಎ.ಆರ್.ಮುಲ್ಲಾ, ಟಿ.ವಿಜಯಭಾಸ್ಕರ, ಅಮರೇಶ ಗೂಳಿ, ಸದು ಮಠ,ಸಂಗಣ್ಣ ಮೇಲಿನಮನಿ,ಮಸೀದಿಗಳ ಮೌಲಾನಾಗಳು ಮತ್ತು ಅಸ್ಕಿ ಫೌಂಡೇಶನ್ ಕೊಣ್ಣೂರ ಪದಾಧಿಕಾರಿಗಳು ಭಾಗವಹಿಸಿದ್ದರು.