ವಿಶ್ವ ಮಹಿಳಾ ದಿನಾಚರಣೆ ಆರೋಗ್ಯ ಭಾಗ್ಯ ದೊಡ್ಡದು:ನಂದಿನಿ
ಮುದ್ದೇಬಿಹಾಳ: ಮಹಿಳೆಯರು ತಮ್ಮ ನಿತ್ಯದ ಕೆಲಸಗಳ ಮಧ್ಯೆ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರದೇ ಆರೋಗ್ಯವಂತ ಜೀವನ ನಡೆಸಲು ಸದಾ ಜಾಗೃತೆ ವಹಿಸಬೇಕೆಂದು ಶಿಕ್ಷಕಿ ನಂದಿನಿ ಕಂಠಿ ಹೇಳಿದರು. ಅವರು ತಾಲ್ಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮಹಿಳಾ ಘಟಕದ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಪಟ್ಟಣದ ಪ್ರಾರ್ಥನಾ ವಿದ್ಯಾಮಂದಿರದಲ್ಲಿ ಹಮ್ಮಿಕೊಂಡ ಸ್ತ್ರೀಯರ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೊದಲಿನ ಕಾಲದಲ್ಲಿ ಸ್ತ್ರೀಯರು ಹೊಲ ಮನೆಗಳಲ್ಲಿ ಕೆಲಸ ಮಾಡುತ್ತ, ನಿಸರ್ಗದ ಜೊತೆಗೆ ಬದುಕುತ್ತ ಆರೋಗ್ಯವಂತರಾಗಿದ್ದರು. ಅವರ ಕಾಲದ ಆಹಾರ, ಜೀವನ ಶೈಲಿ ಸಹ ಉತ್ತಮ ಗುಣಮಟ್ಟದಲ್ಲಿ ಇತ್ತು. ಆದರೆ ಪ್ರಸ್ತುತ ಕಾಲ ಬದಲಾದಂತೆ ಸ್ತ್ರೀಯರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮನೆಯಲ್ಲಿ ದುಡಿಯುವುದರ ಜೊತೆಗೆ ಆಫೀಸು ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ವೈಯಕ್ತಿಕ ಆರೋಗ್ಯದ ಕಡೆ ಗಮನ ಹರಿಸುತ್ತಿಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳನ್ನು ಆರಂಭದ ಹಂತದಲ್ಲಿ ಕಂಡುಕೊಂಡರೆ ಮುಂದಾಗುವ ದೊಡ್ಡ ಸಮಸ್ಯೆಗಳನ್ನು ತಡೆಗಟ್ಟಲು ಸಾಧ್ಯ ಎಂದವರು ಹೇಳಿದರು. ಮಹಿಳೆಯರು ಎದುರಿಸುವ ಗರ್ಭಕೋಶದ ಸಮಸ್ಯೆ, ಸ್ತನ ಕ್ಯಾನ್ಸರ್, ಪಿ.ಸಿ.ಓ.ಡಿ ಮತ್ತು ಪಿ.ಸಿ.ಓ.ಎಸ್. ಕುರಿತು ಅವರು ವಿವರವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಕದಳಿ ವೇದಿಕೆಯ ಅಧ್ಯಕ್ಷೆ ಕಾಶೀಬಾಯಿ ರಾಂಪೂರ, ಹಿರಿಯ ವಕೀಲೆ ಜಯಾ ಸಾಲಿಮಠ ಮಾತನಾಡಿದರು. ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ನಾಗಠಾಣ, ಉಪಾಧ್ಯಕ್ಷೆ ಕವಿತಾ ದಡ್ಡಿ, ಕಾರ್ಯದರ್ಶಿ ರೇಖಾ ಗಡೇದ ಮತ್ತಿತರರು ಇದ್ದರು. ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ನೂರಾರು ಮಹಿಳೆಯರು ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮನ ವೃತ್ತದಿಂದ ಪ್ರಾರ್ಥನಾ ಶಾಲೆಯವರೆಗೆ “ವಾಕ್ ಥಾನ್” ನಡೆಸಿದರು. ವಾಕ್ ಥಾನ್ ನಲ್ಲಿ ವಿಜಯಲಕ್ಷ್ಮಿ ಗಡೇದ, ಗೌರಮ್ಮ ಚಟ್ಟೇರ, ಲಕ್ಷ್ಮೀ ಬಳ್ಳೊಳ್ಳಿ, ಸು಼ಷ್ಮಾ ಜೋಳದ, ಶಿವಲೀಲಾ ಕಡಿ, ಪಾರ್ವತಿ ಪವಾಡಶೆಟ್ಟಿ, ಅಕ್ಷತಾ ಕಡಿ, ಸವಿತಾ ನಾಲತವಾಡ, ರೇಣುಕಾ ಕಡಿ, ಅಕ್ಕಮ್ಮ ಕಲಬುರ್ಗಿ, ಜ್ಯೋತಿ ನಾಗಠಾಣ, ಮಂಜುಳಾ ಗೂಳಿ, ನಿರ್ಮಲಾ ರಾಂಪೂರ, ವಿಜಯಲಕ್ಷ್ಮಿ ಚಿಲ್ಲಾಳಶೆಟ್ಟಿ, ಮಹಾದೇವಿ ಕಿಣಗಿ, ಸುಜಾತಾ ಹುರಕಡ್ಲಿ, ಅನಿತಾ ಕಲಬುರ್ಗಿ, ಬಸಮ್ಮ ಕೋಳೂರ, ಸಂಗೀತಾ, ರೋಹಿಣಿ, ಚಿನ್ಮಯಿ ಮತ್ತಿತರರು ಪಾಲ್ಗೊಂಡಿದ್ದರು.