ಡಿಜಿಟಲ್ ಸಾಕ್ಷರತೆ ಇಂದಿನ ಅನಿವಾರ್ಯತೆ: ಪ್ರಾಂಶುಪಾಲ ಡಾ. ಎಸ್.ಎಲ್. ಪಾಟೀಲ ಅಭಿಮತ
ಪಟ್ಟಣದ ಆಲಮಟ್ಟಿ ರಸ್ತೆ ಹಡಲಗೇರಿ ವಾರದ ಕಾಲೇಜಿನಲ್ಲಿ ‘ಡಿಜಿಟಲ್ ಕೌಶಲ’ ಕಾರ್ಯಾಗಾರಕ್ಕೆ ಚಾಲನೆ
ಮುದ್ದೇಬಿಹಾಳ: “ಇಂದಿನ ವೇಗದ ಜಗತ್ತಿನಲ್ಲಿ ತಂತ್ರಜ್ಞಾನವು ಪ್ರತಿಯೊಬ್ಬರಿಗೂ ಅತ್ಯಗತ್ಯವಾಗಿದ್ದು, ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳ ಹಾದಿ ತೆರೆಯಲು ಡಿಜಿಟಲ್ ಕೌಶಲಗಳು ಅನಿವಾರ್ಯವಾಗಿವೆ,” ಎಂದು ಮುದ್ದೇಬಿಹಾಳದ ಹಡಲಗೇರಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್.ಎಲ್. ಪಾಟೀಲ ಹೇಳಿದರು.
ಪಟ್ಟಣದ ಆಲಮಟ್ಟಿ ರಸ್ತೆಯ ಹಡಲಗೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ “ಡಿಜಿಟಲ್ ಮತ್ತು ಉದ್ಯೋಗಾಧಾರಿತ ಕೌಶಲಗಳು” ವಿಷಯದ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಡಿಜಿಟಲ್ ಜ್ಞಾನದಿಂದ ವಂಚನೆಗೆ ತಡೆ:
ಮುಂದುವರಿದು ಮಾತನಾಡಿದ ಅವರು, “ಈಗಿನ ಎಲ್ಲ ಉದ್ಯೋಗಗಳಿಗೂ ಕನಿಷ್ಠ ಕಂಪ್ಯೂಟರ್ ಜ್ಞಾನ ಬೇಕೇ ಬೇಕು. ಇಂಟರ್ನೆಟ್ ಹಾಗೂ ಡಿಜಿಟಲ್ ಕೌಶಲಗಳನ್ನು ಬಳಸಿಕೊಂಡರೆ ಬ್ಯಾಂಕಿಂಗ್, ಶಾಪಿಂಗ್ ಹಾಗೂ ಸರ್ಕಾರಿ ಸೇವೆಗಳನ್ನು ಮನೆಯಲ್ಲಿಯೇ ಕುಳಿತು ಪಡೆಯಬಹುದು. ಅದರಲ್ಲೂ ಮುಖ್ಯವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಚಾಟ್‌ಜಿಪಿಟಿಯಂತಹ ಹೊಸ ತಂತ್ರಜ್ಞಾನಗಳ ಬಗ್ಗೆ ಜ್ಞಾನ ಹೊಂದುವುದು ಇಂದಿನ ಅಗತ್ಯವಾಗಿದೆ. ಆನ್‌ಲೈನ್ ವಂಚನೆಗಳಿಂದ ಪಾರಾಗಲು ಪ್ರತಿಯೊಬ್ಬರಿಗೂ ಡಿಜಿಟಲ್ ಸಾಕ್ಷರತೆ ಅತಿ ಅವಶ್ಯ,” ಎಂದು ಅಭಿಪ್ರಾಯಪಟ್ಟರು.
ಉದ್ಯೋಗಕ್ಕೆ ಕೌಶಲವೇ ಆಧಾರ:
ಕಾರ್ಯಕ್ರಮದ ಸಂಚಾಲಕರಾದ ಡಾ. ಮಹೇಶ್ವರಿ ಎಸ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, “ಇಂದಿನ ಉದ್ಯೋಗ ಅವಕಾಶಗಳು ಬಹುತೇಕ ತಂತ್ರಜ್ಞಾನ ಮತ್ತು ವೃತ್ತಿಪರ ಕೌಶಲಗಳನ್ನು ಅವಲಂಬಿಸಿವೆ. ಜಗತ್ತಿನ ಯಾವುದೇ ಮೂಲೆಯ ಮಾಹಿತಿ ಪಡೆಯಲು ಡಿಜಿಟಲ್ ಆಪ್‌ಗಳು ಲಭ್ಯವಿದ್ದು, ಅವುಗಳ ಸಮರ್ಪಕ ಬಳಕೆಗೆ ಇಂತಹ ಕಾರ್ಯಾಗಾರಗಳು ಸಹಕಾರಿ,” ಎಂದರು.
ಈ ಕಾರ್ಯಕ್ರಮದ ವೇದಿಕೆಯ ಮೇಲೆ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಧ್ಯಾಪಕರಾದ ಶ್ರೀಮತಿ ನಮ್ರತಾ ಪಾಟೀಲ, ಶ್ರೀಮತಿ ನೇತ್ರಾವತಿ ನಾಲತವಾಡ ಹಾಗೂ IQAC ಸಂಯೋಜಕರಾದ ಡಾ. ಅನಿಲಕುಮಾರ ಡಿಗ್ಗೆ ಉಪಸ್ಥಿತರಿದ್ದರು.
ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ. ರೇವಣಸಿದ್ದಪ್ಪ ಅಮ್ಮಣಿ ಕಾರ್ಯಕ್ರಮ ನಿರ್ವಹಿಸಿದರು. ಬಿಸಿಎ ವಿದ್ಯಾರ್ಥಿನಿ ಕುಮಾರಿ ಅದಿತಿ ಪವಾರ್ ಸ್ವಾಗತಿಸಿದರು, ಡಾ. ಅನಿಲಕುಮಾರ ಡಿಗ್ಗೆ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.