ಹಳೆಯ ಎಸ್‌ಸಿ ರೋಸ್ಟರ್ ಜಾರಿಗೆ ಆಗ್ರಹಿಸಿ ಶಾಸಕರಿಗೆ ಬಂಜಾರಾ ಸಮಾಜದ ಮನವಿ
ಅಫಜಲಪುರ: ಹಳೆಯ ಎಸ್‌ಸಿ ಮೀಸಲಾತಿ ರೋಸ್ಟರ್ ಬಿಂದುಗಳ ಪ್ರಕಾರವೇ ಸರ್ಕಾರಿ ನೇಮಕಾತಿಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಿ ತಾಲೂಕಿನ ಬಂಜಾರಾ ಸಮಾಜದ ಮುಖಂಡರು ಶಾಸಕ ಎಂ.ವೈ. ಪಾಟೀಲ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮುಂಬರುವ ವಿಧಾನಸಭೆ ಅಧಿವೇಶನದಲ್ಲಿ ಹಳೆಯ ಎಸ್‌ಸಿ ರೋಸ್ಟರ್ ಜಾರಿಗೆ ಸಂಬಂಧಿಸಿದ ವಿಷಯವನ್ನು ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವಂತೆ ಹಾಗೂ ಬಂಜಾರಾ ಸಮಾಜಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಿದರು.
ಮನವಿಯಲ್ಲಿ, ಹಳೆಯ ಎಸ್‌ಸಿ ಮೀಸಲಾತಿ ರೋಸ್ಟರ್ ಬಿಂದುಗಳ ಆಧಾರದ ಮೇಲೆ ನೇಮಕಾತಿ ನಡೆಸಿದರೆ ಸಮಾಜದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ದೊರೆಯಲಿದೆ. ರೋಸ್ಟರ್ ವ್ಯವಸ್ಥೆಯಲ್ಲಿ ಬದಲಾವಣೆಗಳಿಂದ ಅನೇಕ ಅಭ್ಯರ್ಥಿಗಳಿಗೆ ಅನ್ಯಾಯವಾಗುವ ಸಾಧ್ಯತೆ ಇರುವುದರಿಂದ, ಹಿಂದಿನ ರೋಸ್ಟರ್ ಪದ್ಧತಿಯನ್ನು ಮುಂದುವರಿಸಿ ನೇಮಕಾತಿ ಪ್ರಕ್ರಿಯೆ ನಡೆಸಬೇಕು ಎಂದು ಆಗ್ರಹಿಸಿದರು.
ಜೋಡೋ ಬಂಜಾರಾ ಸಮಾಜದ ಅಧ್ಯಕ್ಷ ನಾಥುರಾಮ ರಾಠೋಡ ಮಾತನಾಡಿ ಈ ವಿಷಯವು ಕೇವಲ ಒಂದು ಸಮುದಾಯದ ಸಮಸ್ಯೆಯಲ್ಲ; ಸಾವಿರಾರು ಅಭ್ಯರ್ಥಿಗಳ ಉದ್ಯೋಗ ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಮಹತ್ವದ ವಿಷಯವಾಗಿದೆ. ಆದ್ದರಿಂದ ಸರ್ಕಾರ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಶಾಸಕ ಎಂ.ವೈ. ಪಾಟೀಲ ಅವರು, ಬಂಜಾರಾ ಸಮಾಜದ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತಂದು, ವಿಧಾನಸಭೆ ಅಧಿವೇಶನದಲ್ಲಿ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬಂಜಾರಾ ರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಅಪ್ಪು ರಾಠೋಡ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಪ್ರೇಮಕುಮಾರ ರಾಠೋಡ, ಜೋಡೋ ಬಂಜಾರ ಸಮಾಜದ ರಾಜ್ಯ ಕಾರ್ಯದರ್ಶಿ ಖೇಮಸಿಂಗ್ ರಾಠೋಡ, ಮುಖಂಡರಾದ ಅಮರನಾಥ ರಾಠೋಡ, ಆನಂದ ರಾಠೋಡ, ದತ್ತು ಪವಾರ, ಸಮಾಜದ ಹಿರಿಯರು ಉಪಸ್ಥಿತರಿದ್ದರು.

















