ಚಾಲಕನ ಚಾತುರ್ಯದಿಂದ ತಪ್ಪಿದ ದುರಂತ
ಅಫಜಲಪುರ: ತಾಲೂಕಿನ ಅತನೂರ ಗ್ರಾಮದ ಆರ್‌ಎಂಎಸ್ ಶಾಲೆಯ ಸಮೀಪ ಅಫಜಲಪುರದಿಂದ ಕಲಬುರಗಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸೊಂದು ಆಕಸ್ಮಿಕವಾಗಿ ರಸ್ತೆ ಕೆಳಭಾಗಕ್ಕೆ ಇಳಿದ ಪರಿಣಾಮ ಪ್ರಯಾಣಿಕರಲ್ಲಿ ಕೆಲಕಾಲ ಆತಂಕ ಉಂಟಾಯಿತು.
ಆದರೆ, ಚಾಲಕ ತನ್ನ ಸಮಯೋಚಿತ ಚಾತುರ್ಯ ಪ್ರದರ್ಶಿಸಿ ಬಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು ರಸ್ತೆ ಪಕ್ಕಕ್ಕೆ ಇಳಿಸುವ ಮೂಲಕ ಸಂಭವಿಸಬಹುದಾದ ಭೀಕರ ದುರಂತವನ್ನು ತಪ್ಪಿಸಿದರು. ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲರನ್ನು ಅಪಾಯದಿಂದ ಪಾರು ಮಾಡಿದ ಚಾಲಕನ ಧೈರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಘಟಕ ವ್ಯವಸ್ಥಾಪಕ ಎ.ವಿ. ಭೋವಿ ಅವರು ಮಾತನಾಡಿ, ಘಟನೆ ನಡೆದ ಸ್ಥಳದಲ್ಲಿ ರಸ್ತೆ ಇಕ್ಕಟ್ಟಾಗಿದ್ದು, ಎದುರಿಗೆ ಬಂದ ವಾಹನದಿಂದ ಅಪಾಯ ಸಂಭವಿಸುವ ಸಾಧ್ಯತೆ ಇದ್ದ ಕಾರಣ ಚಾಲಕ ಮುನ್ನೆಚ್ಚರಿಕೆಯಾಗಿ ಬಸ್ಸನ್ನು ರಸ್ತೆ ಪಕ್ಕಕ್ಕೆ ಇಳಿಸಿದ್ದಾನೆ. ಇದರಿಂದ ಯಾವುದೇ ಅಪಾಯ ಸಂಭವಿಸಿಲ್ಲ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಸ್ಥಳೀಯರು ಆಗಮಿಸಿ ಸಹಾಯ ಕಾರ್ಯ ನಡೆಸಿದರು. ಚಾಲಕನ ಎಚ್ಚರಿಕೆಯಿಂದ ಹಲವು ಜೀವಗಳು ಸುರಕ್ಷಿತವಾಗಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.


















