ಇಂಡಿ ಕಾಂಗ್ರೆಸ್‌ನಲ್ಲಿ ರಾಜಕೀಯ ಭೂಕಂಪ: ಯಶವಂತರಾಯಗೌಡ ರಾಜೀನಾಮೆ, ಸಾಮೂಹಿಕ ರಾಜೀನಾಮೆಗೆ ಕಾರ್ಯಕರ್ತರ ಸಜ್ಜು
ಇಂಡಿ: ಮೂರು ಬಾರಿ ಇಂಡಿ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಯಶವಂತರಾಯಗೌಡ ಪಾಟೀಲ್ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿರುವುದು ಇಂಡಿ ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ.
ಪಕ್ಷದ ಹೈಕಮಾಂಡ್ ನಿರ್ಧಾರದಿಂದ ತೀವ್ರ ಬೇಸರಗೊಂಡಿರುವ ಶಾಸಕ ಯಶವಂತರಾಯಗೌಡರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸರಣಿ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ.
ಸ್ವಾತಂತ್ರ‍್ಯದ ನಂತರವೂ ಸಿಗದ ಪ್ರಾತಿನಿಧ್ಯ: ವಿಜಯಪುರ ಜಿಲ್ಲೆಯ ಪ್ರಮುಖ ಗಡಿಭಾಗದ ಕ್ಷೇತ್ರವಾದ ಇಂಡಿಗೆ ಸ್ವಾತಂತ್ರ‍್ಯ ಬಂದ ದಿನದಿಂದ ಇದುವರೆಗೂ ಒಂದೇ ಒಂದು ಸಚಿವ ಸ್ಥಾನ ಸಿಕ್ಕಿಲ್ಲ ಎಂಬುದು ಇಲ್ಲಿನ ಜನರ ದಶಕಗಳ ಕಾಲದ ನೋವು. ಸತತವಾಗಿ ಪಕ್ಷವನ್ನು ಗೆಲ್ಲಿಸಿಕೊಂಡು ಬರುತ್ತಿದ್ದರೂ, ಇಂಡಿ ತಾಲೂಕನ್ನು ಸಚಿವ ಸಂಪುಟದಿAದ ದೂರವಿಟ್ಟಿರುವುದು ಗಾಯದ ಮೇಲೆ ಉಪ್ಪು ಸವರಿದಂತಾಗಿದೆ ಎಂದು ಸ್ಥಳೀಯ ಮುಖಂಡರು ಕಿಡಿಕಾರಿದ್ದಾರೆ.
೩೮ ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ಕಳಂಕರಹಿತ ಸೇವೆ ಸಲ್ಲಿಸಿರುವ ಯಶವಂತ್ರಾಯಗೌಡರು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ಹಾಗೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯಾದರೂ ಸಚಿವ ಸ್ಥಾನ ಸಿಗಲಿದೆ ಎಂಬ ಜನಾಪೇಕ್ಷೆ ಸಂಪೂರ್ಣ ಹುಸಿಯಾಗಿದೆ.
ಭರವಸೆ ಹುಸಿ: ನಾಯಕರ ವಿರುದ್ಧ ತಿರುಗಿಬಿದ್ದ ಕಾರ್ಯಕರ್ತರು ಪಕ್ಷದ ಪ್ರಮುಖ ನಾಯಕರು, ನಾಯಕತ್ವ ಬದಲಾವಣೆ ಮತ್ತು ಸಂಪುಟ ಪುನಾರಚನೆ ಸಂದರ್ಭದಲ್ಲಿ ಯಶವಂತರಾಯಗೌಡ ಅವರಿಗೆ ಸಚಿವ ಸ್ಥಾನ ನೀಡುವ ಸ್ಪಷ್ಟ ಭರವಸೆ ನೀಡಿದ್ದರು ಎಂದು ಕಾರ್ಯಕರ್ತರು ನೆನಪಿಸಿದ್ದಾರೆ. ಆದರೆ, ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ಮತ್ತು ಸಂಪುಟ ವಿಸ್ತರಣೆಯಲ್ಲಿ ಅವರ ಹೆಸರನ್ನು ಕೈಬಿಟ್ಟಿರುವುದು ಇಡೀ ಕ್ಷೇತ್ರದ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮುಂಭಾಗದಲ್ಲೂ ಕಾರ್ಯಕರ್ತರು ಈ ಹಿಂದೆ ಜಮಾಯಿಸಿ ಸಚಿವ ಸ್ಥಾನಕ್ಕಾಗಿ ತೀವ್ರ ಒತ್ತಾಯ ಹೇರಿದ್ದರು.
ಜಿಲ್ಲಾ ರಾಜಕಾರಣದ ವೈಷಮ್ಯ: ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಯಶವಂತ್ರಾಯಗೌಡರು ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ವಿರುದ್ಧ ನೇರವಾಗಿಯೇ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯ ರಾಜಕಾರಣ ಸದ್ಯ ಬೀದಿಗೆ ಬಂದಿದೆ. ಕಾಂಗ್ರೆಸ್ ಪಕ್ಷದಲ್ಲಿ ಸದ್ಯ ನಿಷ್ಠಾವಂತರು ಮತ್ತು ಪ್ರಾಮಾಣಿಕರಿಗೆ ಬೆಲೆಯಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ರಾಜೀನಾಮೆಯನ್ನು ವಾಪಸ್ ಪಡೆಯುವುದಿಲ್ಲ ಮತ್ತು ಶಾಸಕನಾಗಿ ಮುಂದುವರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಾಮೂಹಿಕ ರಾಜೀನಾಮೆ ಸರಣಿ:
ಶಾಸಕರ ಅಸಮಾಧಾನದ ಬೆನ್ನಲ್ಲೇ ಇಂಡಿ ಬ್ಲಾಕ್ ಕಾಂಗ್ರೆಸ್, ತಾಲೂಕು ಮಟ್ಟದ ಪದಾಧಿಕಾರಿಗಳು ಮತ್ತು ಮುಂಚೂಣಿ ಘಟಕಗಳ ನಾಯಕರು ಜಂಟಿ ಸಭೆ ನಡೆಸಿದ್ದಾರೆ. ಕ್ಷೇತ್ರಕ್ಕೆ ಸಚಿವ ಸ್ಥಾನ ನೀಡದೆ ಹೈಕಮಾಂಡ್ ತಾರತಮ್ಯ ಎಸಗಿದೆ ಎಂದು ಆರೋಪಿಸಿರುವ ಪದಾಧಿಕಾರಿಗಳು, ಶಾಸಕರ ನಿರ್ಧಾರಕ್ಕೆ ಬೆಂಬಲ ಸೂಚಿಸಿ ತಮ್ಮ ಸ್ಥಾನಗಳಿಗೆ ಸಾಮೂಹಿಕ ರಾಜೀನಾಮೆ ಪತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.
ಈ ದಿಢೀರ್ ಬಂಡಾಯ ಕಾಂಗ್ರೆಸ್ ಮುಖಂಡರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗಡಿ ಭಾಗದಲ್ಲಿ ಪಕ್ಷವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡಿರುವ ಯಶವಂತರಾಯಗೌಡ ಅವರ ಅಸಮಾಧಾನವನ್ನು ಶಮನಗೊಳಿಸದಿದ್ದರೆ, ಮುಂಬರುವ ದಿನಗಳಲ್ಲಿ ವಿಜಯಪುರ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾಗುವ ಮುನ್ಸೂಚನೆ ಸಿಕ್ಕಿದೆ. ಹೈಕಮಾಂಡ್ ತಕ್ಷಣವೇ ಮಧ್ಯಪ್ರವೇಶಿಸಿ ಇಂಡಿ ತಾಲೂಕಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ಸರಿಪಡಿಸಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.
ಬೆಂಗಳೂರಿನ ಶಾಸಕರ ಭವನದ ಮುಂಭಾಗದಲ್ಲಿ ಯಶವಂತ್ರಾಯಗೌಡ ಪಾಟೀಲರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು ಪ್ರತಿಭಟನೆಯಲ್ಲಿ ಶಿವಯೋಗೆಪ್ಪ ಚನಗೊಂಡ, ಶ್ರೀಕಾಂತ ಕೂಡಿಗನೂರ, ಸತೀಶ ಕುಂಬಾರ, ಜಾವೀದ ಮೋಮಿನ್ ಸದಾಶಿವ ಪ್ಯಾಟಿ, ಪ್ರಶಾಂತ ಕಾಳೆ, ಬೀರಪ್ಪ ಪೂಜಾರಿ, ಅಯೂಬ ಬಾಗವಾನ, ಅಣ್ಣಾರಾಯ ಬಬಲಾದ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಇಂಡಿ: ಶಾಸಕ ಯಶವಂತ್ರಾಯಗೌಡ ಪಾಟೀಲರ ಬೆಂಬಲಿಗರು ಬೆಂಗಳೂರಿನ ಶಾಸಕರ ಭವನದ ಮುಂದೆ ಪ್ರತಿಭಟನೆ ನಡೆಸಿದರು.



















