ಕೆಸರಟಗಿ ಹಲ್ಲೆ ಪ್ರಕರಣ: ಸಂತ್ರಸ್ತರಿಗೆ ನ್ಯಾಯ ದೊರಕಿಸಬೇಕು – ಪ್ರಮೋದ ಬೋವಿ
ಅಫಜಲಪುರ: ಕಲಬುರಗಿ ಜಿಲ್ಲೆಯ ಕೆಸರಟಗಿ ಆಶ್ರಯ ಕಾಲೋನಿಯಲ್ಲಿ ಭೋವಿ ವಡ್ಡರ ಸಮಾಜದ ಕುಟುಂಬದ ಮೇಲೆ ನಡೆದಿರುವ ಹಲ್ಲೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಂಘದ ಅಫಜಲಪುರ ತಾಲೂಕು ಅಧ್ಯಕ್ಷ ಪ್ರಮೋದ ಬೋವಿ, ಪ್ರಕರಣದ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಸಂತ್ರಸ್ತ ಕುಟುಂಬಕ್ಕೆ ಶೀಘ್ರ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಗಾಯಗೊಂಡಿರುವ ಗೋಪಾಲ ಅವರಿಗೆ ಸರ್ಕಾರದ ವತಿಯಿಂದ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು. ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ, ಪೊಲೀಸ್ ರಕ್ಷಣೆ ಹಾಗೂ ಅಗತ್ಯ ಪುನರ್ವಸತಿ ಕಲ್ಪಿಸಬೇಕು. ಪ್ರಕರಣದ ಸಮಗ್ರ, ನಿಷ್ಪಕ್ಷಪಾತ ಮತ್ತು ತ್ವರಿತ ತನಿಖೆ ನಡೆಸಿ, ತನಿಖೆಯಲ್ಲಿ ತಪ್ಪಿತಸ್ಥರೆಂದು ಕಂಡುಬರುವ ಎಲ್ಲರ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಭೋವಿ ವಡ್ಡರ ಸಮಾಜವು ಯಾವುದೇ ರೀತಿಯ ಹಿಂಸೆಯನ್ನು ಬೆಂಬಲಿಸುವುದಿಲ್ಲ. ಕಾನೂನು ಹಾಗೂ ಸಂವಿಧಾನದ ಮೇಲೆ ಸಂಪೂರ್ಣ ವಿಶ್ವಾಸವಿದ್ದು, ನ್ಯಾಯಕ್ಕಾಗಿ ಶಾಂತಿಯುತ ಮತ್ತು ಕಾನೂನುಬದ್ಧ ಹೋರಾಟ ನಡೆಸಲಾಗುವುದು. ಸಮಾಜದ ಎಲ್ಲ ಮುಖಂಡರು, ಯುವಕರು ಹಾಗೂ ಸದಸ್ಯರು ಶಾಂತಿ ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡುತ್ತಾ ಸಂತ್ರಸ್ತ ಕುಟುಂಬದ ಬೆಂಬಲಕ್ಕೆ ನಿಲ್ಲುವಂತೆ ಪ್ರಮೋದ ಬೋವಿ ಮನವಿ ಮಾಡಿದರು.