VOJ ನ್ಯೂಸ್ ಡೆಸ್ಕ್ : ಸಾಕಷ್ಟು ಕುತುಹಲ ಮೂಡಿಸಿದ್ದ ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಉತ್ತರಕ್ಕೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಕೊನೆಗೂ ಉತ್ತರ ಸಿಕ್ಕಿದೆ. ಕಿಚ್ಚನ ಅಭಿಮಾನಿಗಳಿಗೆ ಇಂದು ಯುಗಾದಿಯ ಜತೆಗೆ ಡಬಲ್ ಧಮಾಕವು ಹೌದು.
ಇಷ್ಟು ದಿನ ಅಪ್ಡೇಟ್ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು ಇಂದು ವಿಕ್ರಾಂತ್ ರೋಣನ ಸಣ್ಣ ಝಲಕ್ ಅನ್ನು ಕಣ್ತುಂಬಿಕೊಂಡಿದ್ದಾರೆ. ಇಂದು ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ವಿಕ್ರಾಂತ್ ರೋಣನ ರಿಲೀಸ್ ಡೇಟ್ ಟೀಸರ್ ಬಿಡುಗಡೆಯಾಗಿದ್ದು, ಇಷ್ಟು ದಿನ ಚಿತ್ರ ಬಿಡುಗಡೆ ಯಾವಾಗ ಎಂದು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಟೀಸರ್ ಮೂಲಕ ಉತ್ತರ ಸಿಕ್ಕಿದೆ. ಅಂದಹಾಗೆ ಚಿತ್ರವು ಜುಲೈ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ಇಂದು ಬಿಡುಗಡೆಯಾದ ಟೀಸರ್ ಅನ್ನು ಕನ್ನಡದಲ್ಲಿ ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಇಂಗ್ಲಿಷ್ ಟೀಸರ್ ಅನ್ನು ಟೀಮ್ ಇಂಡಿಯಾದ ಕ್ರಿಕೆಟ್ ದಿಗ್ಗಜ ಹಾಗೂ ಮಾಜಿ ಸ್ಫೋಟಕ ಆಟಗಾರ ವೀರೇಂದ್ರ ಸೆಹ್ವಾಗ್ ಬಿಡುಗಡೆ ಮಾಡಿದರು. ಉಳಿದಂತೆ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ, ತಮಿಳಿನಲ್ಲಿ ಸಿಲಂಬರಸನ್ ಸಿಂಬು, ಮಲಯಾಳಂನಲ್ಲಿ ಮೋಹನ್ ಲಾಲ್ ಮತ್ತು ಹಿಂದಿನಲ್ಲಿ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇನ್ನು ಟೀಸರ್ ನೋಡಿದ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಕೇವಲ 1.35 ನಿಮಿಷದ ಟೀಸರ್ ತುಂಬಾ ಅದ್ಧೂರಿಯಾಗಿ ಮೂಡಿ ಬಂದಿದ್ದು ಹಾಲಿವುಡ್ ಮಟ್ಟದ ಮೇಕಿಂಗ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ. ವಿಕ್ರಾಂತ್ ರೋಣ ಚಿತ್ರದಲ್ಲಿ ಕಿಚ್ಚ ಸುದೀಪ್, ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ನಟಿಸಿದ್ದು, ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ಶಾಲಿನಿ ಆರ್ಟ್ಸ್ ಪ್ರೊಡಕ್ಷನ್ ಅಡಿಯಲ್ಲಿ ಜೀ ಸ್ಟುಡಿಯೋಸ್ ಚಿತ್ರವನ್ನು ಅರ್ಪಿಸುತ್ತಿದೆ. ಚಿತ್ರಕ್ಕೆ ಅಲಂಕಾರ್ ಪಾಂಡಿಯನ್ ಸಹ ನಿರ್ಮಾಣವಿದೆ. ಅನುಪ್ ಭಂಡಾರಿ ಅವರು ನಿರ್ದೇಶನ ಮಾಡಿದ್ದಾರೆ.