ಮುದ್ದೇಬಿಹಾಳ: ಪಟ್ಟಣದ ಪ್ರತೀ ವಾರ್ಡುಗಳಲ್ಲಿ ಮತ್ತು ಹಳ್ಳಿ ಹಳ್ಳಿಗಳಲ್ಲಿ ಹಸಿರು ತೋರಣ ಬಳಗಗಳು ಹುಟ್ಟಿಕೊಳ್ಳಬೇಕು, ಸ್ವಚ್ಛ ಪರಿಸರ ನಿರ್ಮಿಸುವ ಕೆಲಸ ನಿರಂತರ ನಡೆಯಬೇಕು ಎಂದು ಶಾಸಕರು, ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರಾದ ಸಿ.ಎಸ್.ನಾಡಗೌಡ್ರ ಹೇಳಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಹಸಿರು ತೋರಣ ಉದ್ಯಾನವನದಲ್ಲಿ ಪುರಸಭೆಯವರು ಹಮ್ಮಿಕೊಂಡಿದ್ದ “ಅಮೃತ ಮಿತ್ರ” ಯೋಜನೆಯಡಿಯಲ್ಲಿ ಉದ್ಯಾನವನ ನಿರ್ವಹಣೆ ಕಾರ್ಯಕ್ಕೆ ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪಟ್ಟಣದಲ್ಲಿರುವ 70 ಕ್ಕೂ ಹೆಚ್ಚು ಸಾರ್ವಜನಿಕ ಉದ್ಯಾನವನಗಳಲ್ಲಿ ಗಿಡಗಳನ್ನು ನೆಟ್ಟು ಸುಂದರ, ಸ್ವಚ್ಛ ವಾತಾವರಣ ನಿರ್ಮಿಸುವ ಕೆಲಸ ನಡೆಯಬೇಕು. ಅತಿಕ್ರಮಕ್ಕೊಳಗಾಗಿರುವ ಉದ್ಯಾನವನಗಳ ತೆರವು ಮಾಡಿ, ಅವುಗಳಿಗೆ ಜೀವ ತುಂಬುವ ಕೆಲಸ ಆಗಬೇಕು. ಪುರಸಭೆ ಸದಸ್ಯರು ತಮ್ಮ ವ್ಯಾಪ್ತಿಗಳಲ್ಲಿ ಬರುವ ಇಂಥ ಉದ್ಯಾನವನಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಬೇಕು. ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆಗಳ ಸಹಯೋಗದಲ್ಲಿ ಈ ಕೆಲಸ ನಿರಂತರ ನಡೆಯಬೇಕು. ಪಟ್ಟಣದಲ್ಲಿ ಪರಿಸರ ಉಳಿಸುವ ಕೆಲಸ ನಿರಂತರವಾಗಿ ಮಾಡುತ್ತಿರುವ ಹಸಿರು ತೋರಣ ಗೆಳೆಯರ ಕೆಲಸಗಳು ಶ್ಲಾಘನೀಯ ಎಂದವರು ಹೇಳಿದರು.
ಹಸಿರು ತೋರಣ ಬಳಗದ ಅಧ್ಯಕ್ಷರಾದ ಬಿ.ಎಚ್.ಬಳಬಟ್ಟಿ ಮಾತನಾಡಿ, ಪಟ್ಟಣದ ಯಾವುದೇ ಬಡಾವಣೆಗಳಲ್ಲಿ ಉದ್ಯಾನವನಕ್ಕೆ ಮೀಸಲಾಗಿರುವ ಜಾಗಗಳಲ್ಲಿ ಗಿಡಗಳನ್ನು ನೆಡುವ ಕೆಲಸವನ್ನು ಹಸಿರು ತೋರಣ ಬಳಗದ ಸದಸ್ಯರು ಮಾಡುತ್ತೇವೆ. ನಾಗರಿಕರು ತಮಗೆ ಗೊತ್ತಿರುವ ಉದ್ಯಾನವನಗಳನ್ನು ಗುರುತಿಸಿ ನಮಗಾಗಲಿ, ಅರಣ್ಯ ಇಲಾಖೆಯವರನ್ನಾಗಲಿ ಸಂಪರ್ಕಿಸುವಂತೆ ಮನವಿ ಮಾಡಿದರು. ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಮಾತನಾಡಿ, ಪಟ್ಟಣದಲ್ಲಿ ಇದೇ ಅಮೃತ ಮಿತ್ರ ಯೋಜನೆಯಡಿಯಲ್ಲಿ ಇನ್ನೂ ಎಂಟು ಉದ್ಯಾನವನಗಳ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗಿದೆ. ಹಸಿರು ತೋರಣ ಬಳಗದ ಸಹಕಾರದೊಂದಿಗೆ ಪಟ್ಟಣದಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿ ಮಾಡುವುದಾಗಿ ಹೇಳಿದರು.
ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಮಾತನಾಡಿ, ಕೇಂದ್ರ ಸರ್ಕಾರದ ಅಮೃತ 2.0 ಅನುದಾನದಲ್ಲಿ ಮಹಿಳಾ ಸ್ವ ಸಹಾಯ ಸಂಘಗಳು ಮತ್ತಷ್ಟು ಸಶಕ್ತ, ಸ್ವಾವಲಂಬಿಯಾಗುವ ಯೋಜನೆ ಇದಾಗಿದೆ. ಉತ್ತಮ ಉದ್ಯಾನವನದ ನಿರ್ಮಾಣಕ್ಕೆ ಸಹಕರಿಸುವುದಾಗಿ ಹೇಳಿದರು.
ವೇದಿಕೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಪ್ರೀತಿ ಶರಣು ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ, ಬಾಲಾಜಿ ಸಕ್ಕರೆ ಕಾರ್ಖಾನೆಯ ಎಂ.ಡಿ. ಹಣಮಂತರಾಯ ಪಾಟೀಲ, ಪುರಸಭೆಯ ಮಾಜಿ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯರಾದ ಭಾರತಿ ಪಾಟೀಲ, ಸಹನಾ ಬಡಿಗೇರ, ರಿಯಾಜ ಢವಳಗಿ, ಗೋಪಿ ಮಡಿವಾಳರ, ಕಂದಾಯ ಅಧಿಕಾರಿ ನಾಗಮ್ಮ ಪಾಟೀಲ, ಪುರಸಭೆ ಸಮುದಾಯ ಸಂಘಟಕ ವಿನೋದ ಝಿಂಗಾಡೆ, ಮಹಾಂತೇಶ ಕಟ್ಟಿಮನಿ, ಜೈ ಸಂತೋಷಿ ಮಾತಾ ಮಹಿಳಾ ಸ್ವ ಸಹಾಯ ಸಂಘದ ಪದ್ಮಾವತಿ ಬೋಗಾರ, ಎಸ್.ಪಿ.ದಂಡಾವತಿ, ಕಾರ್ಯದರ್ಶಿ ಅಮರೇಶ ಗೂಳಿ, ಗೌರವಾಧ್ಯಕ್ಷ ಜಿ.ಎಂ.ಹುಲಗಣ್ಣಿ, ಉಪಾಧ್ಯಕ್ಷ ಸೋಮಶೇಖರ ಚೀರಲದಿನ್ನಿ, ಮಾಜಿ ಅಧ್ಯಕ್ಷರಾದ ಬಿ.ಎಸ್.ಮೇಟಿ, ಅಶೋಕ ರೇವಡಿ, ರಾಜಶೇಖರ ಕಲ್ಯಾಣಮಠ, ರವಿ ಗೂಳಿ, ಡಾ.ವೀರೇಶ ಇಟಗಿ, ಸದಸ್ಯರಾದ ಬಿ.ಎಂ.ಪಲ್ಲೇದ, ಮಲ್ಲಿಕಾರ್ಜುನ ಬಾಗೇವಾಡಿ, ವಿಲಾಸ ದೇಶಪಾಂಡೆ, ವೆಂಕನಗೌಡ ಪಾಟೀಲ, ರವಿ ತಡಸದ, ಡಾ.ಉತ್ಕರ್ಷ ನಾಗೂರ, ವೀರೇಶ ಢವಳಗಿ, ಬಸವರಾಜ ಸಿದರಡ್ಡಿ, ಡಾ.ವಿಜಯಕುಮಾರ ಗೂಳಿ, ಡಾ.ಚಂದ್ರಶೇಖರ ಶಿವಯೋಗಿಮಠ, ಕಿರಣ ಪಾಟೀಲ, ಅರಣ್ಯ ಇಲಾಖೆಯ ಪರಮಾನಂದ ಪಾಟೀಲ ಇದ್ದರು. ಸವಿತಾ ಮುಪ್ಪಯ್ಯನಮಠ ಪ್ರಾರ್ಥಿಸಿದರು. ಕಾರ್ಯದರ್ಶಿ ಅಮರೇಶ ಗೂಳಿ ಸ್ವಾಗತಿಸಿದರು. ಹಸಿರು ತೋರಣ ಬಳಗದ ಸಂಚಾಲಕ ಮಹಾಬಲೇಶ್ವರ ಗಡೇದ ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು. ನಾಗಭೂಷಣ ನಾವದಗಿ ವಂದಿಸಿದರು.