ಸಂಸ್ಕರಣಾ ಘಟಕ ಸ್ಥಾಪನೆಗೆ ಅರ್ಜಿ ಆಹ್ವಾನ
ವಿಜಯಪುರ,ಜೂ.19 : ದ್ವಿದಳ ಧಾನ್ಯಗಳ ಮೌಲ್ಯವರ್ಧನೆ ಉತ್ತೇಜಿಸುವುದು ಹಾಗೂ ರೈತರ ಆದಾಯ ಹೆಚ್ಚಿಸುವ ಉದ್ದೇಶದಿಂದ ದ್ವಿದಳ ಧಾನ್ಯಗಳಲ್ಲಿ ಆತ್ಮನಿರ್ಭರತಾ ಅಭಿಯಾನ ಕಾರ್ಯಕ್ರಮದಡಿ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳು ಎಫ್‌ಪಿಒಎಸ್, ಕ್ಲಸ್ಟರ್ ಮಟ್ಟದ ಒಕ್ಕೂಟಗಳು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪಿಎಸಿಎಸ್, ನೋಂದಾಯಿತ ಸಂಸ್ಥೆಗಳು ಹಾಗೂ ವೈಯಕ್ತಿಕ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವೈಯಕ್ತಿಕ ಫಲಾನುಭವಿಗಳು ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ ವಯೋಮಿತಿ ಹೊಂದಿರಬೇಕು. ಪ್ರತಿ ಕುಟುಂಬದಿಂದ ಪತಿ-ಪತ್ನಿ ಹಾಗೂ ಅವಿವಾಹಿತ ಮಕ್ಕಳು ಒಬ್ಬ ಅರ್ಹ ಫಲಾನುಭವಿಗೆ ಮಾತ್ರ ಸಹಾಯಧನ ಸೌಲಭ್ಯ ಅವಕಾಶವಿರುತ್ತದೆ. ಯೋಜನಾ ವೆಚ್ಚದ ಶೇ.15 ರಷ್ಟು ಸ್ವಂತ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಹೊಂದಿರಬೇಕು.
ಗುಂಪು ಫಲಾನುಭವಿಗಳಾದ ಸಂಸ್ಥೆಗಳು ಕಡ್ಡಾಯವಾಗಿ ನೋಂದಣಿಯಾಗಿರಬೇಕು ಹಾಗೂ ಕನಿಷ್ಠ ಎರಡು ವರ್ಷಗಳ ಕಾಲ ಕಾರ್ಯನಿರ್ವಹಿಸಿರಬೇಕು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು. ಯೋಜನೆಯಡಿ ಅನುಮೋದಿತ ಯೋಜನಾ ವೆಚ್ಚದ ಶೇ.33 ರಷ್ಟು ಸಹಾಯಧನವನ್ನು ಆರ್ಥಿಕ ನೆರವಿನ ರೂಪದಲ್ಲಿ ನೀಡಲಾಗುವುದು.
ಅರ್ಹರು ಜುಲೈ 18ರೊಳಗಾಗಿ ತಮ್ಮ ಹತ್ತಿರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















