ವಿಜಯಪುರ : ನಗರದ ಯೋಗಾಪುರ ಪ್ರದೇಶದಲ್ಲಿ ಅಕ್ರಮವಾಗಿ ಸಂಗ್ರಹಿಸಿದ ಪಡಿತರ ಅಕ್ಕಿಯನ್ನು ಆಹಾರ ಇಲಾಖೆಯ ಉಪನಿರ್ದೇಶಕರ ನೇತೃತ್ವದ ತಂಡವು ವಶಪಡಿಸಿಕೊಂಡಿದೆ ಎಂದು ಜಿಲ್ಲಾಧಿಕಾರಿ ಪಿ ಸುನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ನಗರ ವ್ಯಾಪ್ತಿಯಲ್ಲಿ ಬರುವ ಯೋಗಾಪುರ ಪ್ರದೇಶದಲ್ಲಿ ಅಕ್ರಮವಾಗಿ ಪಡಿತರ ಚೀಟಿದಾರರ ರಿಂದ ಖರೀದಿಸಿದ ಅಕ್ಕಿಯನ್ನು ಸಂಗ್ರಹಿಸಿ ಕಾಳಸಂತೆಯಲ್ಲಿ ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡುತ್ತಿದ್ದಾರೆಂದು ಖಚಿತ ಮಾಹಿತಿಯ ಮೇರೆಗೆ ದಿನಾಂಕ 9 .4 .2022 ರಂದು ಆಹಾರ ಇಲಾಖೆಯ ಉಪನಿರ್ದೇಶಕರ ನೇತೃತ್ವದ ತಂಡವು ಯೋಗಾಪುರದಲ್ಲಿ ಅಬ್ದುಲ್ ಗಫೂರ್ ಶಾ ದರ್ಗಾ ಹತ್ತಿರ ಇರುವ ಪತ್ರಾಸ್ ಶೆಡ್ಡಿನಲ್ಲಿ ದಾಳಿ ಮಾಡಿದಾಗ ಸುಮಾರು 3.55 ಲಕ್ಷ ಕಿಮ್ಮತ್ತಿನ ಒಂದು 161 ಕ್ವಿಂಟಲ್ ಪಡಿತರ ಅಕ್ಕಿ ಇರುವುದು ಕಂಡುಬಂದಿದೆ. ಅದನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಲ್ಲದೇ ಸ್ಥಳೀಯ ವಿಚಾರಣೆಯಿಂದ ತಿಳಿದು ಬಂದಿರುವ ಮಾಹಿತಿಯ ಮೇರೆಗೆ ಈ ಅಕ್ರಮ ವ್ಯವಹಾರ ಮಾಡುತ್ತಿರುವ ಗೂಡು ಲಾಲ ತುಬಾಕಿ ಎಂಬ ವ್ಯಕ್ತಿಯ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ 1955 ರ ಮೇರೆಗೆ ಗೋಲಗುಂಬಜ ಪೊಲೀಸ್ ಠಾಣೆಯಲ್ಲಿ ಆಹಾರ ನಿರೀಕ್ಷಕರು ಪ್ರಕರಣ ದಾಖಲಿಸಿದ್ದಾರೆ.
ಸರ್ಕಾರವು ಪಡಿತರ ಚೀಟಿದಾರರಿಗೆ ನೀಡಲಾಗುವ ಅಕ್ಕಿಯನ್ನು ಮಾರಾಟ ಮಾಡುವುದು ಅಪರಾಧವಾಗಿದ್ದು, ಅಂತ್ಯೋದಯ ಅನ್ನ ಯೋಜನೆ ಮತ್ತು ಬಿಪಿಎಲ್ ಪಡಿತರ ಚೀಟಿದಾರರು ತಮಗೆ ಸರಕಾರ ನೀಡುವ ಉಚಿತ ಅಕ್ಕಿಯನ್ನು ಬೇರೆ ಯಾರಿಗೂ ಕಾಳಸಂತೆಯಲ್ಲಿ ಮಾರಾಟ ಮಾಡದೆ ಸ್ವಂತಕ್ಕೆ ಮಾತ್ರ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.