ಮಳೆಗಾಗಿ ಕತ್ತೆಗಳ ಅದ್ದೂರಿ ಮದುವೆ..ಎಲ್ಲಿ..? ಹೇಗೆ..?
ಅಥಣಿ : ತಾಲೂಕಿನ ಮದಭಾವಿ ಗ್ರಾಮದಲ್ಲಿ ಮಳೆಗಾಗಿ ಕತ್ತೆಗಳ ಅದ್ದೂರಿ ಮದುವೆ: ವರುಣ ದೇವನಿಗೆ ವಿಶೇಷ ಪ್ರಾರ್ಥನೆ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಭೀಕರ ಬರಗಾಲದ ಛಾಯೆ ಆವರಿಸುತ್ತಿದ್ದು, ಸಕಾಲಕ್ಕೆ ಮಳೆ ಬಂದು ನಾಡು ಸುಭಿಕ್ಷವಾಗಲಿ ಎಂದು ಆಶಿಸಿ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕತ್ತೆಗಳ ಮದುವೆಯನ್ನು ಅತ್ಯಂತ ವಿಜೃಂಭಣೆ ಹಾಗೂ ಅದ್ದೂರಿಯಾಗಿ ನೆರವೇರಿಸಲಾಯಿತು.
ಗ್ರಾಮೀಣ ಭಾಗದ ವಿಶಿಷ್ಟ ಜನಪದ ನಂಬಿಕೆಯಂತೆ, ವರುಣ ದೇವನನ್ನು ಒಲಿಸಿಕೊಳ್ಳಲು ಸಾರ್ವಜನಿಕರು ಹಾಗೂ ರೈತ ಬಾಂಧವರು ಒಗ್ಗೂಡಿ ಈ ವಿಶಿಷ್ಟ ಆಚರಣೆಯನ್ನು ಹಮ್ಮಿಕೊಂಡಿದ್ದರು.
ಊರಿನ ಗೌಡರ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಜರುಗಿದ ಕಲ್ಯಾಣ ಮಹೋತ್ಸವವನ್ನು ಮಹಾದೇವ ಗೌಡರು ಹಾಗೂ ಪ್ರವೀಣ ಗೌಡರು ಪೂಜೆ ಸಲ್ಲಿಸಿದರು.
ಮಲ್ಲಿಕಾರ್ಜುನ ಮಠಪತಿ, ಗಿರೀಶ ಜೋಶಿ, ಅಪ್ಪಯ್ಯ ಹಿರೇಮಠ ಅವರಿಂದ ಸಾಮಾನ್ಯ ಮದುವೆಯಂತೆಯೇ ಈ ಕತ್ತೆಗಳಿಗೂ ಸಕಲ ಸಂಪ್ರದಾಯಗಳೊಂದಿಗೆ ಮದುವೆ ಕಾರ್ಯ ನೆರವೇರಿಸಲಾಯಿತು. ಕತ್ತೆಗಳಿಗೆ ಮಂಗಲ ಸ್ನಾನ ಮಾಡಿಸಿ, ಅರಿಶಿನ-ಕುಂಕುಮ ಹಚ್ಚಿ, ನೂತನ ವಸ್ತ್ರ ಹಾಗೂ ಹೂವಿನ ಹಾರಗಳಿಂದ ಶೃಂಗರಿಸಲಾಗಿತ್ತು. ಮಂಗಲ ವಾದ್ಯಗಳ ಭಿನ್ನ ಧ್ವನಿ, ಮಂತ್ರಘೋಷಗಳ ನಡುವೆ ಕತ್ತೆಗಳ ಮದುವೆ ಶಾಸ್ತ್ರೋಕ್ತವಾಗಿ ಸಂಪನ್ನಗೊಂಡಿತು.
ಗಮನ ಸೆಳೆದ ಭವ್ಯ ಮೆರವಣಿಗೆ:
ಮದುವೆಯ ನಂತರ ಶೃಂಗರಿತ ಕತ್ತೆಗಳನ್ನು ಪ್ರಮುಖ ಬೀದಿಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಗ್ರಾಮಸ್ಥರು, ಮಹಿಳೆಯರು ಹಾಗೂ ಯುವಕರು ಸಂಭ್ರಮದಿಂದ ಪಾಲ್ಗೊಂಡಿದ್ದರು. ಹೊತ್ತ ಬಂದಾಗ ಕತ್ತೆ ಕಾಲು ಹಿಡಿಯಬೇಕೆಂಬ ಗಾದೆ ಮಾತಿನಂತೆ ಅಗಸಿಯಲ್ಲಿ ಪ್ರವೀಣ ಗೌಡರು ಹಾಗೂ ಖಂಡೇರಾವ ಘೋರ್ಪಡೆ ಅವರು ಕತ್ತೆಗಳ ಕಾಲನ್ನು ಹಿಡಿದು ವರುಣ ದೇವನು ಪ್ರಸನ್ನನಾಗಿ ಸಕಾಲಕ್ಕೆ ಉತ್ತಮ ಮಳೆ ಕರುಣಿಸಲಿ ಎಂದು ಎಲ್ಲರೂ ಭಕ್ತಿಭಾವದಿಂದ ಪ್ರಾರ್ಥಿಸಿದರು.
“ನಮ್ಮ ಭಾಗದಲ್ಲಿ ಮಳೆ ಬಾರದೆ ಬರಗಾಲ ಎದುರಾದಾಗ ಕತ್ತೆಗಳ ಮದುವೆ ಮಾಡುವ ಮುಖೇನ ಪ್ರಕೃತಿ ಮಾತೆಯನ್ನು ಬೇಡಿಕೊಳ್ಳುವುದು ಹಿರಿಯರ ಕಾಲದಿಂದಲೂ ನಡೆದುಬಂದ ಸಂಪ್ರದಾಯವಾಗಿದೆ. ಈ ಆಚರಣೆಯಿಂದ ಸದ್ಯದಲ್ಲೇ ಉತ್ತಮ ಮಳೆಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಲಿದೆ.
ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ಸಿದರಾಯ ತೋಡಕರ, ಅಸ್ಲಾಂ ಮುಲ್ಲಾ, ಅಶೋಕ ಪೂಜಾರಿ, ರಾಮಣ್ಣ ಮಗದುಮ್ಮ , ಆರ್ ಎಂ ಪಾಟೀಲ,ಚಿದಾನಂದ ಜಾಲಿಹಾಳ ,ಮುರಿಗೆಪ್ಪ ಮಗದುಮ್ಮ ,ರಾಹುಲ ಪಾಟೀಲ ಮಲಕಪ್ಪಾ ಮಗದುಮ್ಮ ,ಕಲ್ಲಪ್ಪ ಪೂಜಾರಿ, ಸಿದ್ದು ಪೂಜಾರಿ, ರಾವಸಾಬ ಮಗದುಮ್ಮ, ಭೀಮು ಗಸ್ತಿ,ರಾವಸಾಬ ಮುಧೋಳ, ಸಿದ್ದು ಪಾಟೀಲ, ಅಶೋಕ ಬಾಡಗಿ,ನಿಜಗುಣಿ ಮಗದುಮ್ಮ, ಮಾರುತಿ ಬಾಡಗಿ,ಅಕ್ಷಯ ನಾಯಿಕ, ತಾತ್ಯಾಸಾಬ ನಾಯಿಕ, ಅನಿಲ ಭಾಮನೆ,ಶರಣಪ್ಪಾ ಶಿಂಧೆ, ಸುರೇಶ ಮಡಿವಾಳ, ಈಶ್ವರ ಕುಂಬಾರೆ, ವಿಶ್ವನಾಥ ಭಂಡಾರೆ, ವಿಠಲ ಶಿಂದೆ ,ಮುರುಗೇಶ ಶ್ಯಾಮನ್ನವರ ಹಾಗೂ ಎಲ್ಲಾ ಸಮಾಜದ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.
ವರದಿ: ಮಹೇಶ್ ಶರ್ಮಾ,ಅಥಣಿ ಬೆಳಗಾವಿ ಜಿಲ್ಲೆ

















