ದಿವ್ಯಾಂಗ ಮಕ್ಕಳನ್ನು ಎಲ್ಲರೂ ಗೌರವದಿಂದ ಕಾಣಬೇಕು..!
ವಿಜಯಪುರ, ಆ. 01: ದಿವ್ಯಾಂಗ ಮಕ್ಕಳನ್ನು ಎಲ್ಲರೂ ಗೌರವದಿಂದ ಕಾಣಬೇಕು ಎಂದು ಬಂಜಾರಾ ಕಸೂತಿ ಸಂಸ್ಥೆ ಸಂಸ್ಥಾಪಕಿ ಆಶಾ ಎಂ. ಪಾಟೀಲ ಕರೆ ನೀಡಿದ್ದಾರೆ.
ರವಿವಾರ ನಗರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಮತ್ತು ಇನ್ನರ್ ವ್ಹೀಲ್ ಕ್ಲಬ್ ಕ್ಲಬ್ ಆಫ್ ಇಂಡಿಯಾ ಬಿಜಾಪುರ ಸಹಯೋಗದಲ್ಲಿ ವಿಶೇಷ ಚೇತನ ಮಕ್ಕಳಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷ ಚೇತನ ಮಕ್ಕಳಲ್ಲಿ ವಿಶೇಷ ಶಕ್ತಿ, ಸಾಮರ್ಥ್ಯ, ಜ್ಞಾನ ಇರುತ್ತದೆ. ಅವರನ್ನು ಸಮಾಜದಲ್ಲಿ ಪ್ರೋತ್ಸಾಹಿಸಿ ಬೆಳೆಸಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಡಾ. ಈಶ್ವರ ಬಾಗೋಜಿ, ಜಿಲ್ಲಾ ವಿಶೇಷ ಚೇತನರ ಕಲ್ಯಾಣಾಧಿಕಾರಿ ರಾಜಶೇಖರ ದೈವಾಡಿ, ಬಿ.ಎಲ್.ಡಿ.ಇ ಸಂಸ್ಥೆಯ ದೈಹಿಕ ನಿರ್ದೇಶಕ ಎಸ್. ಎಸ್. ಕೋರಿ ಹಾಗೂ ಇನ್ನರ್ ವ್ಹೀಲ್ ಸಂಸ್ಥೆಯ ಸದಸ್ಯೆ ಸುಖಲತಾ ಬಿರಾದಾರ, ಗೀತಾ ಪಾಟೀಲ ಹಾಗೂ ನಿರ್ಮಲಾ ದೊಡಮನಿ ಉಪಸ್ಥಿತರಿದ್ದರು.
ಈ ಕ್ರೀಡಾಕೂಟದಲ್ಲಿ 5 ವರ್ಷದಿಂದ 15 ವರ್ಷದ ಮಕ್ಕಳಿಗೆ ಮ್ಯಾರಥಾನ್, ಗುಂಡು ಎಸೆತ, 100 ಮೀಟರ್ ಓಟ, ಬಣ್ಣ ಗುರುತಿಸುವುದು, ಉದ್ದಜಿಗಿತ, ಇತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬಿ.ಎಲ್.ಡಿ.ಇ ಸಮನ್ವಯ ಶಾಲೆಯ ವಿಜಯಲಕ್ಷ್ಮಿ, ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಂಸ್ಥೆ, ಹರಳಯ್ಯ ಅಂಧ ಮಕ್ಕಳ ಶಾಲೆ, ಸ್ವಪ್ನ ಶ್ರವಣ ದೋಷ ಉಳ್ಳ ಮಕ್ಕಳ ಶಾಲೆ ಜಿಲ್ಲೆಯ ಸರಕಾರಿ ಶಾಲೆ ಮತ್ತು ನೋಂದಾಯಿತ ಸಂಘ ಸಂಸ್ಥೆಗಳ ಸುಮಾರು 300ಕ್ಕೂ ಹೆಚ್ಚು ವಿಶೇಷ ಚೇತನ ಮಕ್ಕಳು, ಬುದ್ದಿಮಾಂದ್ಯ, ಶ್ರವಣದೋಷ ಹಾಗೂ ಇತರ ನ್ಯೂನ್ಯತೆ ಹೊಂದಿರುವ ಮಕ್ಕಳು ಭಾಗವಹಿಸಿದ್ದರು. ನಾನಾ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ವಿಶೇಷ ಚೇತನ ಮಕ್ಕಳಿಗಾಗಿ ಕ್ರೀಡಾಕೂಟ: ವಿಜಯಪುರ ನಗರದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಮತ್ತು ಇನ್ನರ್ ವ್ಹೀಲ್ ಕ್ಲಬ್ ಕ್ಲಬ್ ಆಫ್ ಇಂಡಿಯಾ ಬಿಜಾಪುರ ಸಹಯೋಗದಲ್ಲಿ ವಿಶೇಷ ಚೇತನ ಮಕ್ಕಳಿಗೆ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಕ್ರೀಡಾಜ್ಯೋತಿಯನ್ನು ಆಶಾ ಎಂ. ಪಾಟೀಲ ಸ್ವೀಕರಿಸಿ ಕ್ರೀಡಾಕೂಟ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಶೇಷ ಚೇತನ ಕ್ರೀಡಾಪಟುಗಳು ಉಪಸ್ಥಿತರಿದ್ದರು.


















