ನಾರಾಯಣಪುರ ಜಲಾಶಯದಿಂದ ಹೆಚ್ಚುವರಿಯಾಗಿ 0.50 ಟಿ.ಎಂಸಿ. ನೀರು ಬಿಡುಗಡೆ
ವಿಜಯಪುರ, ಮೇ.15 ನಾರಾಯಣಪುರ ಜಲಾಶಯದಿಂದ ಇಂಡಿ ಶಾಖಾ ಕಾಲುವೆ ಹಾಗೂ ಇಂಡಿ ಏತ ನೀರಾವರಿ ಕಾಲುವೆಗಳ ಮೂಲಕ ಕೆರೆಗಳ ಅವಲಂಬಿತ ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ಹೆಚ್ಚುವರಿಯಾಗಿ 0.50 ಟಿಎಂಸಿ ನೀರನ್ನು ಬಿಡುಗಡೆಗೊಳಿಸಲಾಗಿದ್ದು, ನೀರು ನಿಗದಿತ ಅಂತರವನ್ನು ತಲುಪುವಂತೆ ನಿಗಾವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶಿಸಿದ್ದಾರೆ.
ನಾರಾಯಣಪುರ ಜಲಾಶಯದಿಂದ ಪ್ರಸ್ತುತ ಹರಿಬಿಟ್ಟಿರುವ 1.50 ಟಿಎಂಸಿ ನೀರಿನೊಂದಿಗೆ ಹೆಚ್ಚುವರಿಯಾಗಿ 0.50 ಟಿಎಂಸಿ ನೀರನ್ನು ಇಂಡಿ ಶಾಖಾ ಕಾಲುವೆ ಹಾಗೂ ಇಂಡಿ ಏತ ನೀರಾವರಿ ಕಾಲುವೆಗಳ ಮೂಲಕ ಬಿಡುಗಡೆಗೊಳಿಸಿರುವ ನೀರು ಪೋಲಾಗದಂತೆ ಮಿತವಾಗಿ ಬಳಸುವ ಕುರಿತು ಮತ್ತು ನೀರು ನಿಗದಿತ ಅಂತರವನ್ನು ತಲುಪುವಂತೆ 24/7 ನಿಗಾ ವಹಿಸುವಂತೆ ಕಂದಾಯ, ಪೊಲೀಸ್, ನೀರಾವರಿ ಸ್ಥಳೀಯ ಸಂಸ್ಥೆ, ಗ್ರಾಮೀಣಾಭಿವೃದ್ದಿ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಿ ಆದೇಶಿಸಲಾಗಿದೆ.
ವಾಚ್ & ವಾರ್ಡ ಕೈಗೊಳ್ಳಲು ನಿಯೋಜಿತ ಅಧಿಕಾರಿ-ಸಿಬ್ಬಂದಿಗಳು ಕುಡಿಯುವ ಉದ್ದೇಶಕ್ಕಾಗಿ ಬಿಡುಗಡೆ ಮಾಡಲಾದ ನೀರನ್ನು ಬೇರೆ ಉದ್ದೇಶಕ್ಕೆ ಬಳಸದಂತೆ ನಿಗಾ ವಹಿಸಬೇಕು. ಅನಧಿಕೃತ ಪಂಪಸೆಟ್ ಕಂಡು ಬಂದಲ್ಲಿ ಕರ್ನಾಟಕ ನೀರಾವರಿ ಕಾಯ್ದೆ-1965ರಂತೆ ಕ್ರಮ ಕೈಗೊಳ್ಳಬೇಕು. ಹರಿಬಿಡಲಾದ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡುವ ಕುರಿತು ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ರಚನೆ ಮಾಡಿಕೊಂಡು ಸೂಕ್ತ ನಿಗಾ ಇಡಬೇಕು. ಉಪವಿಭಾಗಾಧಿಕಾರಿಗಳು ದೈನಂದಿನ ವರದಿ ಪಡೆದು, ನೀರಿನ ಸದ್ಭಳಕೆ ಕುರಿತು ಸಾಕ್ಷ್ಯಚಿತ್ರಗಳನ್ನು ಪಡೆದು ಸಲ್ಲಿಸುವಂತೆ ಅವರು ಸೂಚನೆ ನೀಡಿದ್ದಾರೆ.
ಹೆಸ್ಕಾಂ ಅಧಿಕಾರಿಗಳು ನೀರು ಬಿಡುವ ದಿನಗಳಲ್ಲಿ ಕಾಲುವೆಗೆ ಎಡ-ಬಲ ಭಾಗಕ್ಕೆ ತಾಗಿದಂತೆ ಅಳವಡಿಸಿರುವ ರೈತರ ವಿದ್ಯುತ್ ಪಂಪಸೆಟ್‍ಗಳ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸಬೇಕು. ಸೋಲಾರ ಆಧಾರಿತ ಮೋಟಾರ್, ಜನರೇಟರ್‍ಗಳ ಸಂಪರ್ಕ ಸಹ ಕಡಿತಗೊಳಿಸಬೇಕು. ಕಾಲುವೆಗಳ ಮೇಲುಸ್ತುವಾರಿಗೆ ನೇಮಿಸಿದ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ಅವರು ಆದೇಶಿಸಿದ್ದಾರೆ.