ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅ. 13ರಂದು ರಾಷ್ಟ್ರೀಯ ಹೆದ್ದಾರಿ ಬಂದ್‌ಗೆ ಕರೆ: ಮಾಳಪ್ಪ ಪೂಜಾರಿ
ಇಂಡಿ: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಕ್ಟೋಬರ್ 13ರಂದು ರಾಜ್ಯಾದ್ಯಂತ ರಾಷ್ಟ್ರೀಯ ಹೆದ್ದಾರಿ ಬಂದ್ ಹೋರಾಟಕ್ಕೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಇಂಡಿ ತಾಲೂಕು ಅಧ್ಯಕ್ಷ ಮಾಳಪ್ಪ ಪೂಜಾರಿ ತಿಳಿಸಿದ್ದಾರೆ.
ಸೋಮವಾರ ಸಂಜೆ ಪತ್ರಿಕಾ ಪ್ರಕಟಣೆ ನೀಡಿದ ಅವರು,
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕೃಷಿ ಸಚಿವರ ನೇತೃತ್ವದಲ್ಲಿ. ಇಂದು ಅಂದರೆ ಸೋಮವಾರ ಅಕ್ಟೋಬರ್ 12ರಂದು ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಕುರಿತು ವಿಶೇಷ ಸಭೆ ಕರೆಯಲಾಗಿತ್ತು. ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವುದು ಹಾಗೂ ರಾಜ್ಯದಲ್ಲಿ ಉತ್ಪಾದನೆಯಾಗುವ ಎಥನಾಲ್ ಅನ್ನು ಶೇಕಡಾ 100ರಷ್ಟು ಖರೀದಿಸಬೇಕು ಎಂಬ ಬೇಡಿಕೆಗಳನ್ನು. ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸೇರಿದಂತೆ ವಿವಿಧ ರೈತಪರ ಸಂಘಟನೆಗಳ ಪ್ರತಿನಿಧಿಗಳು ದೆಹಲಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.
ಆದರೆ, ಸಭೆಯಲ್ಲಿ ರೈತರ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಚುನಪ್ಪ ಪೂಜಾರಿ ಹಾಗೂ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ್ ಗುರೂಜಿ ಅವರ ಸೂಚನೆಯ ಮೇರೆಗೆ ನಾಳೆ ಅಕ್ಟೋಬರ್ 13ರಂದು ರಾಜ್ಯದ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ. ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಿಜಯಪುರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಿಡಗುಂದಿ ಭಾಗದಲ್ಲಿಯೂ ರಸ್ತೆ ಬಂದ್ ಹೋರಾಟ ನಡೆಸಲು ಕರೆ ನೀಡಲಾಗಿದೆ. ಈ ಹೋರಾಟಕ್ಕೆ ಇಂಡಿ ತಾಲೂಕಿನ ಸಮಸ್ತ ರೈತ ಬಾಂಧವರು, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು ಹಾಗೂ ಇತರ ಪ್ರಗತಿಪರ ಸಂಘಟನೆಗಳು ಬೆಂಬಲ ನೀಡಿ, ಹೋರಾಟದಲ್ಲಿ ಭಾಗವಹಿಸಬೇಕೆಂದು ಮಾಳಪ್ಪ ಪೂಜಾರಿ ಮನವಿ ಮಾಡಿದ್ದಾರೆ.
ಇಂಡಿ: ಮಾಳಪ್ಪ ಪೂಜಾರಿ ಭಾವಚಿತ್ರ

















