ಹೆಣ್ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಿ : ಸಚಿವ ಎಂ.ಬಿ. ಪಾಟೀಲ ಪೋಷಕರಿಗೆ ಸೂಚನೆ
ಕೋಟ್ಯಾಳದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಸಿಎಸ್ ಆರ್ ಅನುದಾನದಡಿ ಉನ್ನತೀಕರಿಸಿದ ಪ್ರೌಢ ಶಾಲಾ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ
ವಿಜಯಪುರ, ಜುಲೈ 3 : ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಂಸ್ಥೆಗಳ ಸಿ.ಎಸ್.ಆರ್ ಅನುದಾನದಡಿ 3.25 ಕೋಟಿ ರೂಪಾಯಿ ವೆಚ್ಚದಲ್ಲಿ, ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಗೊಂಡಿದ್ದು, ಕೋಟ್ಯಾಳ ಸುತ್ತಮುತ್ತಲಿನ ಗ್ರಾಮಗಳ ನೂರಾರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಆಧುನಿಕ ಕಲಿಕಾ ವಾತಾವರಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ. ಪಾಟೀಲ ಅವರು ಹೇಳಿದರು.
ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಸಂಸ್ಥೆಗಳ ಸಿ.ಎಸ್.ಆರ್ ಅನುದಾನದಡಿ ನಿರ್ಮಿಸಲಾದ ಸುಸಜ್ಜಿತ ನೂತನ ಸರ್ಕಾರಿ ಪ್ರೌಢ ಶಾಲಾ ಕಟ್ಟಡವನ್ನು ಶುಕ್ರವಾರ ವಿದ್ಯುಕ್ತವಾಗಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ದೊಡ್ಡದಾದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತನ್ನ ಆದಾಯದ ಮರುಹೂಡಿಕೆ ಮಾಡಿದ ಏಕೈಕ ವಿಮಾನ ನಿಲ್ದಾಣವಾಗಿದೆ. ಆ ಲಾಭಾಂಶದಲ್ಲಿ ಸಮಾಜಮುಖಿ ಕಾರ್ಯ ನಿರ್ವಹಿಸುವುದರಲ್ಲಿ ಸದಾ ಮುಂದಿರುವ ಈ ಸಂಸ್ಥೆ, ಕೋಟ್ಯಾಳದಲ್ಲಿ ಗುಣಮಟ್ಟದ ಹಾಗೂ ಸುಂದರ ಶಾಲಾ ಕಟ್ಟಡ ನಿರ್ಮಿಸಿಕೊಟ್ಟಿದೆ. ಗ್ರಾಮೀಣ ಪ್ರತಿಭೆಗಳಿಗೆ ಈ ಶಾಲಾ ಕಟ್ಟಡ ಅನುಕೂಲವಾಗಲಿದ್ದು, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದರೆ, ಗ್ರಾಮೀಣ ಬಾಲಕಿಯರಿಗೆ ಈ ಶಾಲೆ ಭವಿಷ್ಯದ ದಿನಗಳಲ್ಲಿ ವರದಾನವಾಗಲಿದೆ ಎಂದರು.
ಹಾಗಾಗಿ ಹೆಣ್ಣು ಮಕ್ಕಳನ್ನು ಪೋಷಕರು ಕಡ್ಡಾಯವಾಗಿ ಶಾಲೆಗೆ ಕಳುಹಿಸಿಕೊಡಬೇಕು. ಭವಿಷ್ಯದ ದಿನಗಳಲ್ಲಿ ಅವರು ಇಂಜಿನೀಯರ್ ಹಾಗೂ ವೈದ್ಯರು ಒಳಗೊಂಡಂತೆ ಉನ್ನತ ಹುದ್ದೆಗೇರಿ ಉಜ್ವಲ ಭಾರತ ನಿರ್ಮಾಣಕ್ಕೆ ಕೈಜೋಡಿಸಲಿ ಎಂದು ಸಚಿವರು ಆಶಿಸಿದರು.
ಈ ಸುಸಜ್ಜಿತ ಶಾಲಾ ಕಟ್ಟಡವನ್ನು ಒಟ್ಟು 3.25 ಕೋಟಿ ರೂಪಾಯಿ ವೆಚ್ಚದಲ್ಲಿ, 7,000 ಚದರ ಅಡಿ ವಿಸ್ತೀರ್ಣದಲ್ಲಿ ಅತ್ಯಾಧುನಿಕವಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕಟ್ಟಡ ನಿರ್ಮಿಸಲಾಗಿದೆ. ಇದರೊಂದಿಗೆ 800 ಚದರ ಅಡಿಯ ಹಳೆಯ ಕಟ್ಟಡದ ಪುನರುಜ್ಜೀವನ ಕಾರ್ಯವನ್ನು ಸಹ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಶಾಲೆಯಲ್ಲಿ 1 ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏಳು ಸುಸಜ್ಜಿತ ಕೊಠಡಿಗಳನ್ನು ಸಿದ್ಧಪಡಿಸಲಾಗಿದ್ದು, ಮಕ್ಕಳಲ್ಲಿ ನಾವೀನ್ಯತೆ ಮತ್ತು ಚಟುವಟಿಕೆ ಆಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲು ಸ್ಟೇಮ್‌ಲ್ಯಾಬ್’ ಹಾಗೂ ‘ನಲಿ-ಕಲಿ’ ಕೊಠಡಿಗಳನ್ನು ವಿಶೇಷವಾಗಿ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳ ಸುಲಭ ಕಲಿಕೆಗೆ ಪೂರಕವಾಗಿ 135 ಹೊಸ ಪೀಠೋಪಕರಣಗಳು, ಬಾಲಕ ಮತ್ತು ಬಾಲಕಿಯರಿಗಾಗಿ ಪ್ರತ್ಯೇಕ 10 ಸುಸಜ್ಜಿತ ಶೌಚಾಲಯ ಸೇರಿದಂತೆ ಆಧುನಿಕ ಸೌಲಭ್ಯವುಳ್ಳ ಅಡುಗೆ ಕೊಠಡಿ ಹಾಗೂ ವಿಶಾಲವಾದ ಊಟದ ಸಭಾಂಗಣವನ್ನು ಇಲ್ಲಿ ನಿರ್ಮಿಸಲಾಗಿದೆ ಎಂದರು.
ಹೊನವಾಡದಲ್ಲೂ ಹೈಸ್ಕೂಲ್ ಕಟ್ಟಡ ಕಟ್ಟಿಕೊಡುತ್ತಿದ್ದಾರೆ. ಬಡವರ, ಕೂಲಿ ಕಾರ್ಮಿಕರ ಮಕ್ಕಳಿಗೆ ಇಂತಹ ಅವಕಾಶ ಕಲ್ಪಿಸಿಕೊಟ್ಟು ಅವರು ಉತ್ತಮ ಶಿಕ್ಷಣ ಪಡೆಯಲು ಅವಕಾಶ ಒದಗಿಬರುತ್ತದೆ ಎಂದರು.
ಸಿಎಸ್ ಆರ್ ಅನುದಾನದಲ್ಲಿ ಶಾಲಾ ಕಾಲೇಜಿಗೂ ಜಿಲ್ಲಾದ್ಯಂತ ಶಾಲಾ ಕಟ್ಟಡ ಸ್ಮಾರ್ಟ ಕ್ಲಾಸ್ ಕಟ್ಟಡ, ಪಾಠೋಪಕರಣ, ಮೈದಾನ, ಪೀಠೋಪಕರಣ ಒದಗಿಸಲಾಗುವುದು ಎಂದರು.
ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳು ಉತ್ತಮ ಶಿಕ್ಷಣ ಪಡೆಯಲಿ ಎಂಬ ಆಶಯದಿಂದ ಸಿ ಎಸ್ ಆರ್ ಅನುದಾನದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು. ಶಾಲಾ ಬ್ಯಾಗ್ ಜೊತೆಗೆ ಮತಕ್ಷೇತ್ರದ ಎಲ್ಲಾ ಶಾಲೆಗಳು ಹೊಸ ಕಟ್ಟಡ ಹಾಗೂ ಸ್ಮಾರ್ಟಕ್ಲಾಸ್ ಹೊಂದಲಿವೆ ಎಂದು ಸಚಿವರು ಹೇಳಿದರು.
ಶಾಲಾ ಸಂಪನ್ಮೂಲ ಅಭಿವೃದ್ಧಿಗೆ ಎಲ್ಲ ಸಿಎಸ್ ಆರ್ ಅನುದಾನ ಬಳಕೆ ಮಾಡಲಾಗುವುದು ಎಂದು ಹೇಳಿದರು. ಅಂಗನವಾಡಿ ಕಟ್ಟಡಗಳು, ನೀರಾವರಿಗೆ ಆದ್ಯತೆ, ಕೆರೆ ಅಭಿವೃದ್ಧಿ, ಹೈನುಗಾರಿಕೆಗೆ ಒತ್ತು ನೀಡಲಾಗಿದೆ. ಹೈನುಗಾರಿಕೆ ಇಡೀ ಜಿಲ್ಲೆಗೆ ವಿಸ್ತರಣೆ ಮಾಡಲಾಗುವುದು. ಬಾಬಾನಗರದಲ್ಲಿ ಡ್ಯಾಂ ನಿರ್ಮಾಣ ಮಾಡಿ, ಮಳೆಗಾಲದಲ್ಲಿ ತುಂಬಿಸಿ ಬೇಸಿಗೆ ಸಂದರ್ಭದಲ್ಲಿ ಬಳಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ನೀರಾವರಿಯಿಂದ ಭೂಮಿ ಬೇಡಿಕೆ ಹೆಚ್ಚಾಗಿದೆ. ಇಂದು ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ. ಇದಕ್ಕೆ ನೀರಾವರಿ ಯೋಜನೆ ಒಂದುಕಡೆಯಾದರೆ ಕೆರೆ ಹಾಗೂ ಹಳ್ಳ ತುಂಬುವುದು ಇನ್ನೊಂದೆಡೆ ನಡೆದಿದೆ. ಹಾಗಾಗಿ ಈ ಭಾಗದ ಜಮೀನಿನ ಬೇಡಿಕೆ ಹೆಚ್ಚಾಗುತ್ತಲೇ ಇದೆ ಎಂದರು. ಪ್ರತಿ ಕಿಮೀ ಚೆಕ್ ಡ್ಯಾಂ ನಿರ್ಮಾಣ ಮಾಡಿ ನೀರು ಹಿಂಗಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆ ಪ್ರಗತಿಯಲ್ಲಿದೆ. ಶಿಕ್ಷಣ, ಬಾಂದಾರ ನಿರ್ಮಾಣ, ನೀರಾವರಿ, ವಿದ್ಯುತ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಮಾಡಲಾಗುತ್ತಿದೆ ಎಂದರು.
ಈ ನೂತನ ಶಾಲಾ ಕಟ್ಟಡದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ನೋಡಿಕೊಳ್ಳಬೇಕು. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿ ಬೋಧನೆ ಮಾಡಬೇಕು ಎಂದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಹರಿ ಮರಾರ ಅವರು ಮಾತನಾಡಿ, ಈ ಸುಂದರ ಕಟ್ಟಡ ವಿದ್ಯಾರ್ಥಿಗಳ ಭವ್ಯ ಭವಿತವ್ಯ ಬೆಳಗುವ ಜ್ಞಾನ ದೇಗುಲವಾಗಿದೆ. ನೀರಾವರಿಯಿಂದ ಈ ಭಾಗದ ರೈತರ ಬಾಳು ಸಮೃದ್ಧಿಗೊಳಿಸಿದ ಡಾ.ಎಂಬಿ ಪಾಟೀಲ ಅವರು ಶೈಕ್ಷಣಿಕ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಶ್ರಮದ ಫಲವಾಗಿ ಈ ಕಟ್ಟಡ ಮೈದಳೆದಿದೆ ಎಂದ ಅವರು, ಮಕ್ಕಳಿಗೆ ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡಿಸುವ ಮೂಲಕ ಒಳ್ಳೆಯ ಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.
ಮುಖ್ಯ ಹಣಕಾಸು ಅಧಿಕಾರಿ ಭಾಸ್ಕರ ಆನಂದರಾವ್ ಅವರು ಮಾತನಾಡಿ, ಶಿಕ್ಷಣ, ಮೂಲಸೌಲಭ್ಯ ನೀಡುತ್ತಿರುವ ಸಚಿವರ ಕಾರ್ಯ ಅನನ್ಯವಾಗಿದೆ. ರಾಷ್ಟ್ರದ ಭವಿಷ್ಯ ಶಾಲಾ ಕಟ್ಟಡದಲ್ಲಿ ನಿರ್ಮಾಣಗೊಳ್ಳುತ್ತದೆ ಎಂಬ ಮಾತಿದೆ. ಹಾಗಾಗಿ ಈ ಶಾಲೆಯಯಲ್ಲಿ ಭವಿಷ್ಯ ನಿರ್ಮಿಸಿಕೊಳ್ಳಲಿರುವ ಮಕ್ಕಳು ದೊಡ್ಡ ಕನಸು ಕಾಣುವ ಮೂಲಕ ಬದುಕಿನಲ್ಲಿ ಉನ್ನತ ಸಾಧನೆ ಮಾಡಬೇಕು ಎಂದರು.
ಭೂಮಿ ದಾನ ಮಾಡಿದ ಶ್ರೀಮತಿ ಕಮಲಾ ಮುರುಗೇಶ ನಿರಾಣಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸವರಾಜ ತಳವಾರ ಅವರು ಮಾತನಾಡಿ, ಈ ಶಾಲಾ ಕಟ್ಟಡ ಸುಸಜ್ಜಿತವಾಗಿದ್ದು, ಮಕ್ಕಳ ಕಲಿಕೆಗೆ ಅನುಕೂಲವಾಗಿದೆ. ಆಧುನಿಕ ಸೌಲಭ್ಯಯುಳ್ಳ ಉತ್ತಮವಾದ ಶಾಲಾ ಕಟ್ಟಡ ಇದಾಗಿದೆ. ಈ ಕ್ಷೇತ್ರದಲ್ಲಿ 263 ಕೊಠಡಿಗಳನ್ನು ಸಿಎಸ್ ಆರ್ ಅನುದಾನದಲ್ಲಿ ನಿರ್ಮಿಸಲಾಗಿದೆ. 76 ಸರ್ಕಾರಿ ಪ್ರೌಢಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಒದಗಿಸಲಾಗಿದೆ. ಶಾಲಾ ಬ್ಯಾಗ್ ನೀಡಲಾಗುತ್ತಿದೆ. ಈ ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ಕಂಡಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಲಾ ಕಟ್ಟಡಕ್ಕೆ ಭೂಮಿ ದಾನ ನೀಡಿರುವ ಆನಂದರಾವ್ ಕುಲಕರ್ಣ, ಅನೀಲಕುಮಾರ ಪಾಟೀಲ, ವಿ.ಎಸ್ ಪಾಟೀಲ ಸೇರಿದಂತೆ ಹಲವು ಗಣ್ಯರು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

















