ಕೊಲೆ ಮಾಡಿ ರುಂಡ ಕೊಂಡೊಯ್ದ ಪ್ರಕರಣ ಭೇದಿಸಿದ ಪೊಲೀಸರು, 24 ಗಂಟೆಗಳಲ್ಲಿ ಇಬ್ಬರು ಆರೋಪಿಗಳ ಬಂಧನ
ರಾಯಚೂರು, ಜೂ.22 : ನಗರದಲ್ಲಿ ಸಂಚಲನ ಮೂಡಿಸಿದ್ದ ಯುವಕನ ಕೊಲೆ ಹಾಗೂ ರುಂಡವನ್ನು ಕೊಂಡೊಯ್ದ ಪ್ರಕರಣವನ್ನು ರಾಯಚೂರು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೂನ್ 21ರಂದು ವೆಂಕೋಬ @ ಯಂಕಪ್ಪ ಎಂಬುವರು ರಾಯಚೂರು ಪಶ್ಚಿಮ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮ ಪುತ್ರ ತಿರುಪತಿ (30) ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಹೋಗಿರುವುದಾಗಿ ಆರೋಪಿಸಿದ್ದರು. ಈ ದೂರಿನ ಮೇರೆಗೆ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಡಿಎಸ್ಪಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ತನಿಖೆಯ ವೇಳೆ ಆರೋಪಿಗಳಾದ ಆವೇಶ (25) ಹಾಗೂ ರಾಜು (25), ಇಬ್ಬರೂ ಕುಲಸುಂಬಿ ಕಾಲೋನಿ ನಿವಾಸಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆಯಲ್ಲಿ ಕೊಲೆ ಕೃತ್ಯದಲ್ಲಿ ಅವರ ಪಾತ್ರ ಬೆಳಕಿಗೆ ಬಂದಿದ್ದು, ಮೃತನ ರುಂಡವನ್ನು ಸಹ ಜಪ್ತಿ ಮಾಡಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ ಮೃತ ತಿರುಪತಿ ಹಾಗೂ ಆರೋಪಿತರ ನಡುವೆ ವೈಷಮ್ಯ ಮತ್ತು ಮೊಬೈಲ್ ವಿಚಾರವಾಗಿ ನಡೆದ ಗಲಾಟೆಯೇ ಕೊಲೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
ಪ್ರಕರಣ ದಾಖಲಾದ 24 ಗಂಟೆಗಳೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ. ತಂಡದಲ್ಲಿ ವಿವಿಧ ಪೊಲೀಸ್ ಠಾಣೆಗಳ ಸಿಪಿಐ, ಪಿಎಸ್‌ಐ, ಎಎಸ್‌ಐ, ಹೆಡ್ ಕಾನ್ಸ್‌ಟೇಬಲ್ ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿ ಕಾರ್ಯಾಚರಣೆ ನಡೆಸಿದರು.
ಈ ಪ್ರಕರಣದ ತ್ವರಿತ ಭೇದನೆ ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ರಾಯಚೂರು ಪೊಲೀಸರ ಕಾರ್ಯಕ್ಷಮತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.


















