ಜಮೀನಿಗೆ ಹೋಗಲು ದಾರಿ ಇಲ್ಲ; ತಹಸೀಲ್ದಾರರ ಮಧ್ಯಸ್ಥಿಕೆಗೆ ರೈತನ ಮನವಿ
ಅಫಜಲಪೂರ: ತಾಲೂಕಿನ ಉಡಚಾಣ ಗ್ರಾಮದ ರೈತ ಬಸವರಾಜ ಶರಣಪ್ಪ ಕುಂಬಾರ ಅವರು ತಮ್ಮ ಜಮೀನಿಗೆ ತೆರಳುವ ಹಾದಿ ಬಂದ್ ಆಗಿರುವ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹರಿಸುವಂತೆ ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಗ್ರಾಮದ ಸರ್ವೆ ನಂ. 425/2ರ 2 ಎಕರೆ 20 ಗುಂಟೆ ಜಮೀನಿಗೆ ಹಲವು ವರ್ಷಗಳಿಂದ ದಕ್ಷಿಣ ಭಾಗದಲ್ಲಿರುವ ಹಾದಿಯನ್ನು ಬಳಸಿಕೊಂಡು ಸಂಚಾರ ಮಾಡಲಾಗುತ್ತಿತ್ತು. ಆದರೆ ಅಳ್ಳಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನೂತನ ಡಾಂಬರ ರಸ್ತೆ ನಿರ್ಮಾಣ ಕಾಮಗಾರಿ ವೇಳೆ ರಸ್ತೆಯ ಪಕ್ಕದಲ್ಲಿ ಜೆಸಿಬಿ ಯಂತ್ರದ ಮೂಲಕ ಆಳವಾದ ಚರಂಡಿ ನಿರ್ಮಿಸಿರುವುದರಿಂದ ಜಮೀನಿಗೆ ಹೋಗಿ ಬರಲು ಇದ್ದ ಹಾದಿ ಸಂಪೂರ್ಣ ಬಂದ್ ಆಗಿದೆ ಎಂದು ಅವರು ದೂರಿದ್ದಾರೆ.
ಚರಂಡಿ ನಿರ್ಮಾಣದಿಂದ ಕೃಷಿ ಚಟುವಟಿಕೆಗಳಿಗೆ ಅಡಚಣೆ ಉಂಟಾಗಿದ್ದು, ಕೃಷಿ ಯಂತ್ರೋಪಕರಣಗಳು ಹಾಗೂ ವಾಹನಗಳ ಸಂಚಾರ ಕಷ್ಟಕರವಾಗಿದೆ. ಇದರಿಂದ ರೈತರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಜಮೀನಿಗೆ ತೆರಳಲು ಅಗತ್ಯವಾದ ರಸ್ತೆ ಹಾಗೂ ಹಾದಿಯನ್ನು ಶೀಘ್ರವಾಗಿ ವ್ಯವಸ್ಥೆ ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಬಸವರಾಜ ಕುಂಬಾರ ಆಗ್ರಹಿಸಿದ್ದಾರೆ.



















