ಸುಳ್ಳು ಆರೋಪಗಳಿಗೆ ರೈತರು ಮರುಳಾಗಬೇಡಿ: ಕಿರಣಕುಮಾರ ಮನವಿ
ಅಫಜಲಪುರ :ರೈತರಿಗೆ ಕೃಷಿ ಇಲಾಖೆಯ ನಿಯಮಾನುಸಾರವೇ ರಸಗೊಬ್ಬರ ವಿತರಣೆ ಮಾಡಲಾಗುತ್ತಿದ್ದು, ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ ಎಂದು ಗೊಲ್ಲಾಳೇಶ್ವರ ಆಗ್ರೋ ಏಜೆನ್ಸಿಯ ಮಾಲೀಕ ಕಿರಣಕುಮಾರ ತಿಳಿಸಿದ್ದಾರೆ.
ಪಟ್ಟಣದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಮುಂಗಾರು ಆರಂಭವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಸರ್ಕಾರ ಹಾಗೂ ಕೃಷಿ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ಹೇಳಿದರು.
ನಮ್ಮ ಸಂಸ್ಥೆಯ ಬೆಳವಣಿಗೆಯನ್ನು ಸಹಿಸದ ಕೆಲವರು ಸುಳ್ಳು ಆರೋಪಗಳನ್ನು ಮಾಡಿ ಅಪಪ್ರಚಾರ ನಡೆಸುತ್ತಿದ್ದಾರೆ. ಇಂತಹ ಆರೋಪಗಳಿಗೆ ರೈತರು ಮರುಳಾಗಬಾರದು ಹಾಗೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.
ರೈತರು ಕಡ್ಡಾಯವಾಗಿ ಎಫ್‌ಐಡಿ ಮಾಡಿಸಿಕೊಂಡು, ಕೃಷಿ ಇಲಾಖೆಯ ನಿಯಮಾನುಸಾರ ರಸಗೊಬ್ಬರ ಖರೀದಿಸಬೇಕು. ಅಗತ್ಯ ದಾಖಲೆಗಳೊಂದಿಗೆ ಬರುವ ರೈತರಿಗೆ ಯಾವುದೇ ತೊಂದರೆ ಇಲ್ಲದೆ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ತಾಲೂಕಿನ ರೈತರು ಶಾಂತಚಿತ್ತದಿಂದ ಇಲಾಖೆಯ ನಿಯಮಗಳನ್ನು ಪಾಲಿಸಿ ಸಹಕರಿಸಬೇಕು. ಸರ್ಕಾರದ ನಿಯಮಾವಳಿಗಳಂತೆ ಎಲ್ಲ ರೈತರಿಗೆ ರಸಗೊಬ್ಬರ ಪೂರೈಕೆ ಮಾಡುವ ಬದ್ಧತೆ ನಮ್ಮ ಸಂಸ್ಥೆಗಿದೆ ಎಂದು ಕಿರಣಕುಮಾರ ತಿಳಿಸಿದರು.

















