ಆನ್‌ಲೈನ್ ಔಷಧ ಮಾರಾಟ ನಿಲ್ಲಿಸಲು ಆಗ್ರಹಿಸಿ ಅಫಜಲಪುರದಲ್ಲಿ ಪ್ರತಿಭಟನೆ
ಅಫಜಲಪುರ: ಆನ್‌ಲೈನ್ ಮೂಲಕ ನಡೆಯುತ್ತಿರುವ ಅಕ್ರಮ ಔಷಧ ಮಾರಾಟ ತಡೆಗಟ್ಟುವಂತೆ ಆಗ್ರಹಿಸಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಬುಧವಾರ ತಾಲೂಕಿನಾದ್ಯಂತ ಒಂದು ದಿನ ಮೆಡಿಕಲ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಅಂತರರಾಷ್ಟ್ರೀಯ ಹಾಗೂ ಆನ್‌ಲೈನ್ ವೇದಿಕೆಗಳ ಮೂಲಕ ನಡೆಯುತ್ತಿರುವ ಅನಿಯಂತ್ರಿತ ಔಷಧ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿಷ್ಕ್ರಿಯತೆಯಿಂದ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಬರೆದ ಮನವಿ ಪತ್ರವನ್ನು ಗ್ರೇಡ್-2 ತಹಶೀಲ್ದಾರ್ ಮೂಲಕ ಸಲ್ಲಿಸಲಾಯಿತು.
ಅಫಜಲಪುರದ ಎಲ್ಲಾ ಔಷಧಶಾಸ್ತ್ರಜ್ಞರು ಹಾಗೂ (AIOCD) ಸಂಘದ ಕರೆಗೆ ಸರ್ವಾನುಮತದಿಂದ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ಆರೋಗ್ಯ ಮತ್ತು ರೋಗಿಗಳ ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳತ್ತ ಸರ್ಕಾರ ಗಮನ ಹರಿಸಬೇಕು. ಅಕ್ರಮ ಹಾಗೂ ಅನಿಯಂತ್ರಿತ ಆನ್‌ಲೈನ್ ಔಷಧ ಮಾರಾಟ, ನಕಲಿ ಇ-ಪ್ರಿಸ್ಕ್ರಿಪ್ಷನ್ ಬಳಕೆ, ವೈದ್ಯಕೀಯ ಸಲಹೆ ಇಲ್ಲದೆ ಮನೆ ಬಾಗಿಲಿಗೆ ಔಷಧ ವಿತರಣೆ ಹಾಗೂ ಆಳವಾದ ರಿಯಾಯಿತಿ ಪದ್ಧತಿಗಳು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿಯಾಗಿವೆ ಎಂದು ಮುಖಂಡರು ಹೇಳಿದರು.
ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆ-1940 ಹಾಗೂ ನಿಯಮಗಳು-1945 ಅಡಿಯಲ್ಲಿ ಆನ್‌ಲೈನ್ ಔಷಧ ಮಾರಾಟಕ್ಕೆ ಸ್ಪಷ್ಟ ನಿಬಂಧನೆ ಇಲ್ಲದಿದ್ದರೂ ವಿವಿಧ ಕಂಪನಿಗಳು ಹಲವು ವರ್ಷಗಳಿಂದ ಔಷಧ ಮಾರಾಟ ನಡೆಸುತ್ತಿವೆ. ಕೋವಿಡ್ ಅವಧಿಯಲ್ಲಿ ಜಾರಿಗೆ ತಂದ ಜಿಎಸ್ಆರ್ 220(ಇ) ಅಧಿಸೂಚನೆಯನ್ನು ದುರುಪಯೋಗಪಡಿಸಿಕೊಂಡು ಆನ್‌ಲೈನ್ ವೇದಿಕೆಗಳ ಮೂಲಕ ಅನಿಯಂತ್ರಿತ ಮನೆ ವಿತರಣೆ ನಡೆಯುತ್ತಿದೆ ಎಂದು ಆರೋಪಿಸಿದರು.
ಸಾರ್ವಜನಿಕ ಆರೋಗ್ಯ ಹಾಗೂ ಸಣ್ಣ ಚಿಲ್ಲರೆ ಔಷಧ ವ್ಯಾಪಾರಿಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಕೋವಿಡ್ ಸಂದರ್ಭದಲ್ಲಿ ದೇಶದಾದ್ಯಂತ ನಿರಂತರ ಔಷಧ ಪೂರೈಕೆಯಲ್ಲಿ ಔಷಧ ವ್ಯಾಪಾರಿಗಳು ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರು ನೆನಪಿಸಿದರು.
*ಪ್ರಮುಖ ಬೇಡಿಕೆಗಳು*
ಔಷಧಿಗಳ ಅಕ್ರಮ ಆನ್‌ಲೈನ್ ಮಾರಾಟದ ವಿರುದ್ಧ ಕಠಿಣ ಕ್ರಮ
• ಪರಿಶೀಲಿತ ಇ-ಪ್ರಿಸ್ಕ್ರಿಪ್ಷನ್ ಇಲ್ಲದೆ ಔಷಧ ಮಾರಾಟ ಸಂಪೂರ್ಣ ನಿಷೇಧ
• ಜಿಎಸ್ಆರ್ 817(ಇ) ಹಾಗೂ ಜಿಎಸ್ಆರ್ 220(ಇ) ಅಧಿಸೂಚನೆ ಹಿಂಪಡೆದು ಕ್ರಮ
• ಆನ್‌ಲೈನ್ ವೇದಿಕೆಗಳ ಆಳವಾದ ರಿಯಾಯಿತಿ ನೀತಿ ತಡೆ
ಈ ಸಂದರ್ಭದಲ್ಲಿ ತಾಲೂಕು ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕಮಲಕರ ಶೆಟ್ಟಿ, ಕಾರ್ಯದರ್ಶಿ ಮಹೇಶ ಆಲೇಗಾಂವ, ಮಹಾಂತೇಶ ಯಂಕಂಚಿ, ಆದಿಲ್ ಪಾಶಾ, ಆನಂದ ಶೆಟ್ಟಿ, ರಾಘವೇಂದ್ರ ಚಿನ್ವಾರ, ಸತೀಶ ಹಿರೇಮಠ, ಜಗನಾಥ ಕುಲಕರ್ಣಿ, ಚೆನ್ನವೀರ ಹಿರೇಮಠ, ಕಿಟ್ಟು ಕುಲಕರ್ಣಿ, ಅನೀಲ ನಾಕೇದಾರ, ಬಸವರಾಜ ಮನ್ಮೀ, ನಾಗನಾಥ ಕಮರೆಡ್ಡಿ, ಸುಭಾಷ ಅಲ್ದಿ,ಆನಂದ ಬಿರಾದಾರ, ಶರಣು,ಪುಟ್ಟುಗೊಡ್ ಪೊಲೀಸ್ ಪಾಟೀಲ, ಶಿವಸ್ವಾಮಿ ಜೇವರ್ಗಿ, ಅರುಣ ಪತ್ತಾರ,ರಜನೀಶ, ಸಂಜೀವ ಟೊಣ್ಣೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
.