ರಾತ್ರಿ ನೀರು ಹಾಯಿಸಲು ಹೋದ ಕೃಷಿ ಕಾರ್ಮಿಕನಿಗೆ ಹಾವು ಕಚ್ಚಿ ಸಾವು
ಅಫಜಲಪುರ: ತಾಲ್ಲೂಕಿನ ಮಾತೋಳಿ ಗ್ರಾಮದ ಕೃಷಿ ಕಾರ್ಮಿಕ ಸೈಬಣ್ಣ ಜಮಾದಾರ್ (37) ಅವರಿಗೆ ರಾತ್ರಿ ವೇಳೆ ಹೊಲದಲ್ಲಿ ಬೆಳೆಗೆ ನೀರು ಹಾಯಿಸುವಾಗ ಹಾವು ಕಚ್ಚಿ ದುರ್ಘಟನೆ ಸಂಭವಿಸಿದ್ದು, ಆಸ್ಪತ್ರೆಗೆ ಸಾಗಿಸುತ್ತಿರುವ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ.
ವಿದ್ಯುತ್ ಲೋಡ್ ಶೆಡ್ಡಿಂಗ್ ಸಮಸ್ಯೆಯಿಂದ ರೈತರು ಹಾಗೂ ಕೃಷಿ ಕಾರ್ಮಿಕರು ರಾತ್ರಿ ವೇಳೆ ಹೊಲದ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದೇ ಅವಘಡಕ್ಕೆ ಕಾರಣವಾಗಿದೆ ಎಂದು ಜೆಡಿಎಸ್ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ರಾಜಕುಮಾರ ಬಡದಾಳ ಆರೋಪಿಸಿದ್ದಾರೆ.
“ವಿದ್ಯುತ್ ಪೂರೈಕೆಯಲ್ಲಿ ಉಂಟಾಗುತ್ತಿರುವ ವ್ಯತ್ಯಯದಿಂದ ಕೃಷಿ ಕಾರ್ಮಿಕರಿಗೆ ತೀವ್ರ ತೊಂದರೆಯಾಗುತ್ತಿದೆ” ಎಂದು ಅವರು ತಿಳಿಸಿದ್ದಾರೆ.
ಹಾವು ಕಚ್ಚಿ ಮೃತಪಟ್ಟ ಸೈಬಣ್ಣ ಜಮಾದಾರ್ ಕುಟುಂಬಕ್ಕೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ಮೃತರಿಗೆ ಇಬ್ಬರು ಮಕ್ಕಳಿದ್ದು, ಅವರ ವಿದ್ಯಾಭ್ಯಾಸಕ್ಕೆ ನೆರವು ನೀಡಬೇಕು. ಜೊತೆಗೆ ಪತ್ನಿಗೆ ಮಾಸಾಶನ ಸೇರಿದಂತೆ ಅಗತ್ಯ ಸರ್ಕಾರಿ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



















