ಪತ್ನಿ ಹತ್ಯೆ ಬಳಿಕ ಮಗುವಿನೊಂದಿಗೆ ಬಾವಿಗೆ ಹಾರಿ ಪತಿ ಸಾವು ||ಗ್ರಾಮಸ್ಥರಿಂದ ಮಗು ರಕ್ಷಣೆ
ಅಫಜಲಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆಗೈದು, ನಂತರ ಮಗುವಿನೊಂದಿಗೆ ಬಾವಿಗೆ ಹಾರಿ ಸಾವನ್ನಪ್ಪಿದ ಘಟನೆ ತಾಲೂಕಿನ ಮದರಾ (ಕೆ) ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮೀಪುತ್ರ ಮೂಲಗೆ (30) ತನ್ನ ಪತ್ನಿ ಅಂಜಲಿ (23) ಅವರನ್ನು ಮನೆಯಲ್ಲಿ ಕುಡುಗೋಲಿನಿಂದ ಹತ್ಯೆ ಮಾಡಿದ ಬಳಿಕ, ನಾಲ್ಕು ವರ್ಷದ ಮಗ ಅಥರ್ವನೊಂದಿಗೆ ಸಮೀಪದ ಬಾವಿಗೆ ಜಿಗಿದಿದ್ದಾನೆ.
ಈ ಸಂದರ್ಭವನ್ನು ಗಮನಿಸಿದ ಸ್ಥಳೀಯರು ತಕ್ಷಣ ಸ್ಪಂದಿಸಿ ಬಾವಿಗೆ ಇಳಿದು ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಆದರೆ, ಲಕ್ಷ್ಮೀಪುತ್ರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಡಿವೈಎಸ್ಪಿ ತಮ್ಮರಾಯ ಪಾಟೀಲ್, ಸಿಪಿಐ ಲಖನ್ ಮಸಗುಪ್ಪಿ, ಪಿಎಸ್ಐ ಸೋಮಲಿಂಗ ಒಡೆಯರ್, ವಾತ್ಸಲ್ಯ ಬಿರಾದಾರ ಹಾಗೂ ಸಂಗೀತಾ ಸಿಂಧೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ರೇವೂರ (ಬಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.


















