ಬಿಎಸ್ಎಪ್ ತರಬೇತಿ ಮುಗಿಸಿ ಗ್ರಾಮಕ್ಕೆ ಆಗಮಿಸಿದ ವೀರ ಯೋಧೆಗೆ ಅಧ್ದೂರಿ ಸ್ವಾಗತ
ತಿಕೋಟಾ: ಬಡ ಕುಟುಂಬದಲ್ಲಿ ಜನಿಸಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ವಿಧ್ಯಾಭ್ಯಾಸ ಮಾಡಿ ದೇಶ ಸೇವೆ ಮಾಡಲು ಭಾರತೀಯ ಸೈನ್ಯಕ್ಕೆ ಆಯ್ಕೆಯಾಗಿ ತರಬೇತಿ ಪೂರ್ಣಗೊಳಿಸಿ ಗ್ರಾಮಕ್ಕೆ ಮರಳಿದ ವೀರ ಯೋಧೆಗೆ ಗ್ರಾಮದಲ್ಲಿ ಅಧ್ದೂರಿಯಾಗಿ ಸ್ವಾಗತ ಮಾಡಿದ್ದಾರೆ.
ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಉಪ್ಪಾರ ವಸ್ತಿಯ ರಾಜಶ್ರೀ ಗೇಂಡ ಹಾಗೂ ಸಿದ್ದಪ್ಪ ಗೇಂಡ ದಂಪತಿಗಳ ಪುತ್ರಿ ಲಕ್ಷ್ಮಿ ಗೇಂಡ ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಿಎಸ್ಎಪ್ ತರಬೇತಿಯನ್ನು ಪೂರ್ಣಗೊಳಿಸಿ ಗ್ರಾಮಕ್ಕೆ ಆಗಮಿಸಿದ್ದಾಗ ಈಡೀ ವಸ್ತಿಯ ಜನರು ಅಧ್ದೂರಿಯಾಗಿ ಸ್ವಾಗತಿಸಿ ಹೂಮಳೆ ಸುರಿಸಿ ಸಂತಸ ವ್ಯಕ್ತಪಡಿಸಿದರು.
ವಿಧ್ಯಾಭ್ಯಾಸ ಮಾಡಿದ ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಆಗಮಿಸಿದ ಲಕ್ಷ್ಮಿಗೆ ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರು ಸನ್ಮಾನಿಸಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವೀರ ಯೋಧೆ ಲಕ್ಷ್ಮಿ ಗೇಂಡ ತಂದೆ ತಾಯಿ, ನನಗೆ ಕಲಿಸಿದ ಗುರುಗಳು ಹಾಗೂ ಹಿರಿಯರ ಆಶಿರ್ವಾದದಿಂದ ಭಾರತ ಮಾತೆಯ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಬಾಲ್ಯದಿಂದಲೂ ನನಗೆ ದೇಶ ಸೇವೆ ಮಾಡಬೇಕೆನ್ನುವ ಕನಸು ಇತ್ತು, ಆ ಕನಸು ನಿಮ್ಮೆಲರ ಆಶಿರ್ವಾದದಿಂದ ಇಡೇರಿದೆ. ವಿಧ್ಯಾರ್ಥಿಗಳು ಜೀವನದಲ್ಲಿ ಒಂದು ಗುರಿಯನ್ನು ಇಟ್ಟುಕೊಳ್ಳಬೇಕು. ಆ ಗುರಿಯ ಕನಸು ನನಸಾಗುವಂತೆ ಅಭ್ಯಾಸ ಮಾಡಬೇಕು ಎಂದು ಹೇಳಿದಳು.
ಮುಖ್ಯೋಪಾಧ್ಯಾಯ ಎಂ.ಎಂ.ಮಕಾನದಾರ ಹಾಗೂ ಶಿಕ್ಷಕ ನಾಗೇಶ ಸರ್ ಮಾತನಾಡಿ ಇಂತಹ ಗಡಿಭಾಗದ ಬಡಕುಟುಂಬದಲ್ಲಿ ಜನಿಸಿ ಕಷ್ಟಪಟ್ಟು ಓದಿ ದೈರ್ಯಶಾಲಿಯಾಗಿ ದೇಶ ಸೇವೆ ಮಾಡಲು ಹೋರಟ ಈ ಶಾಲೆಯ ವಿಧ್ಯಾರ್ಥಿನಿ ಲಕ್ಷ್ಮಿ ಎಲ್ಲ ವಿಧ್ಯಾರ್ಥಿಗಳಿಗೆ ಪ್ರೇರಣೆಯಾಗಿದ್ದಾಳೆ. ಅವಳು ನಮ್ಮ ಶಾಲೆಯ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ರವೀಂದ್ರ ಚಿಕ್ಕಮಠ, ಎಂ.ಬಿ.ತಳೆವಾಡ, ಭಾರತಿ, ವಿರೇಶ್ವರಿ ಬೆಳ್ಳುಂಡಗಿ, ಮಾರುತಿ ಜಾಧವ, ಎಸ್ಡಿಎಂಸಿ ಅಧ್ಯಕ್ಷ ಶೇಖಸಾಬ ಮುಲ್ಲಾ, ಉಪಾಧ್ಯಕ್ಷ ಪರಮೇಶ್ವರ ದೊಡಮನಿ, ಸಿದರಾಯ ಗದ್ಯಾಳ ಹಾಗೂ ಮಕ್ಕಳು ಇದ್ದರು.



















