ಮುದ್ದೇಬಿಹಾಳ :- ತಾಲ್ಲೂಕಿನ ರೂಡಗಿ ಗ್ರಾಮಕ್ಕೆ ರವಿವಾರ ಆಗಮಿಸಿದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಅವರು ಈಡಿಗ ಸಮುದಾಯದ ಜನರೊಂದಿಗೆ ಐತಿಹಾಸಿಕ 700 ಕಿ.ಮೀ. 41 ದಿನಗಳ ಪಾದಯಾತ್ರೆಯ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪಾದಯಾತ್ರೆಯ ಭಿತ್ತಿಚಿತ್ರವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಅವರು ಈಡಿಗ, ಬಿಲ್ಲವ, ನಾಮಧಾರಿ ಸೇರಿದಂತೆ 26 ಪಂಗಡಗಳನ್ನು ಒಳಗೊಂಡ ಸಮಾಜವು ಪರಂಪರೆ ಕುಲಕಸುಬಿನ ಮೇಲೆ ಅವಲಂಬಿತವಾಗಿರುವ ಸಮುದಾಯವಾಗಿದ್ದು, ಸರ್ಕಾರದ ಕೆಲವು ನಿರ್ಧಾರಗಳ ಪರಿಣಾಮವಾಗಿ ಇಂದು ಅನೇಕ ಕುಟುಂಬಗಳು ಸಂಕಷ್ಟದಲ್ಲೇ ಜೀವನ ಸಾಗಿಸುವಂತಾಗಿದೆ ಎಂದು ಅವರು ಹೇಳಿದರು. ಆದರಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜ.6ರಂದು ಕಲಬುರಗಿ ಜಿಲ್ಲೆಯ ಕರದಾಳದಿಂದ ಬೆಂಗಳೂರಿನವರೆಗೆ 41 ದಿನಗಳ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯ ಸರ್ಕಾರವು ಬ್ರಹ್ಮಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮಕ್ಕೆ ತಕ್ಷಣವೇ ₹500 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. ಸಮಾಜವನ್ನು ಈಗಿರುವ 2ಎ ಮೀಸಲಾತಿಯಿಂದ ಎಸ್‌ಟಿ ಮೀಸಲಾತಿಗೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಜೊತೆಗೆ ಬ್ರಹ್ಮಶ್ರೀ ನಾರಾಯಣಗುರುಗಳ ಪುತ್ಥಳಿಯನ್ನು ಬೆಂಗಳೂರಿನ ವಿಧಾನಸೌಧದ ಎದುರು ಸ್ಥಾಪಿಸಬೇಕು ಎಂಬ ಪ್ರಮುಖ ಬೇಡಿಕೆಗಳಿವೆ ಎಂದು ವಿವರಿಸಿದರು.
ಸೇಂದಿ ಮಾರಾಟವು ಈಡಿಗ ಸಮುದಾಯದ ಪರಂಪರ ಕುಲಕಸುಬಾಗಿದ್ದು, 2004ರಲ್ಲಿ ಸೇಂದಿ ನಿಷೇಧ ಹಾಗೂ 2007ರಲ್ಲಿ ಸಾರಾಯಿ ನಿಷೇಧ ಜಾರಿಯಾದ ಪರಿಣಾಮ ಸಮುದಾಯದ ಆರ್ಥಿಕ ಬದುಕಿಗೆ ಭಾರೀ ಹೊಡೆತ ಬಿದ್ದಿದೆ. ಈ ಎರಡೂ ನಿಷೇಧಗಳ ಬಳಿಕ ಸರ್ಕಾರವು ಸಮುದಾಯಕ್ಕೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ರೂಪಿಸಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಮುದಾಯದ ಹಿರಿಯರಾದ ಯಲ್ಲಪ್ಪ ಕುಂದರಗಿ, ಲಕ್ಷ್ಮಣ ಈಳಗೇರ, ರಮೇಶ ಈಳಗೇರ, ಪ್ರಕಾಶ ಕುಂದರಗಿ, ಶಿವು ಈಳಗೇರ, ಅಶೋಕ ಕುಂದರಗಿ, ಗುಂಡಕರ್ಚಿಗಿ ಗ್ರಾಮದ ನಾಗು ಈಳಗೇರ, ಯಲ್ಲಪ್ಪ ಈಳಗೇರ, ಸಂಗಪ್ಪ ಈಳಗೇರ ಸೇರಿದಂತೆ ಉಪಸ್ಥಿತರಿದ್ದರು.