ಮುದ್ದೇಬಿಹಾಳ: ನಿಡಗುಂದಿಯ ರಾಷ್ಟ್ರೀಯ ಹೆದ್ದಾರಿ ೫೦ರಲ್ಲಿ ರಸ್ತೆ ಅಪಘಾತಕ್ಕೀಡಾಗಿ ಬುಧವಾರ ದುರಂತ ಸಾವನ್ನಪ್ಪಿದ್ದ ಭಾರತೀಯ ಗಡಿ ಭದ್ರತಾ ಪಡೆಯ ಯೋಧ ಮೌನೇಶ ಖೂಬಪ್ಪ ರಾಠೋಡ ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವಗಳೊಂದಿಗೆ ಗುರುವಾರ ಮದ್ಯಾಹ್ನ ಹುಟ್ಟೂರು ಮುದ್ದೇಬಿಹಾಳ ತಾಲೂಕಿನ ಕಾಳಗಿ ತಾಂಡಾದಲ್ಲಿ ಶೋಕಸಾಗರದ ನಡುವೆ ನೆರವೇರಿತು.
ನಿಡಗುಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ವಾರಸುದಾರರಿಗೆ ಹಸ್ತಾಂತರಿಸಿದಾಗ ಅಲ್ಲಿಯೇ ಜನಸಾಗರದ ನಡುವೆ ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ ತರಲಾಯಿತು.
ನಿಡಗುಂದಿ ತಹಸೀಲ್ದಾರ್, ಸಿಪಿಐ, ಪಿಎಸ್‌ಐ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗೌರವ ನಮನ ಸಲ್ಲಿಸಿ, ಮಾಜಿ ಸೈನಿಕರು ಮೊಂಬತ್ತಿ ಬೆಳಗಿ ಬೀಳ್ಕೊಟ್ಟಿದ್ದರು. ರಾತ್ರಿಯಿಡೀ ಯೋಧನ ಮನೆಯ ಪಕ್ಕದಲ್ಲೇ ಇರುವ ಜಮೀನಿನಲ್ಲಿ ಶವವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಬೆಳಿಗ್ಗೆ ಶವದ ಅಂತಿಮಯಾತ್ರೆ ಸಂದರ್ಭ ಮೌನೇಶ ಅಮರ್‌ರಹೆ, ಜವಾನ್ ಅಮರ್‌ರಹೆ ಘೋಷಣೆಗಳು ಮಾಜಿ ಸೈನಿಕರಿಂದ ಮೊಳಗಿದವು.
ಬೆಳಿಗ್ಗೆ ಮಹಾರಾಷ್ಟçದ ಲಾತೂರನಿಂದ ಆಗಮಿಸಿದ್ದ ಬಿಎಸ್‌ಎಫ್ ಬಟಾಲಿಯನ್‌ನ ಇನ್ಸಪೆಕ್ಟರ್ ಸತ್ಯೇಂದ್ರ ಸಿಂಗ್, ಹೆಚ್‌ಪಿಸಿ ವೇಣುಗೋಪಾಲ ನೇತೃತ್ವದ ೧೧ ಸೈನಿಕರ ತಂಡ ಅಂತಿಮ ಕ್ರಿಯೆಗೆ ಗೌರವ ಸಲ್ಲಿಸಲು ಸಕಲ ತಯಾರಿ ಮಾಡಿಕೊಂಡಿತ್ತು. ಮದ್ಯಾಹ್ನ ಒಂದು ಗಂಟೆಯ ನಂತರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದ ಜಮೀನಿನಲ್ಲಿ ಯೋಧರು ಮೂರು ಸುತ್ತು ಗುಂಡು ಹಾರಿಸುವ ಮೂಲಕ, ಶವಪೆಟ್ಟಿಗೆಯ ಮೇಲೆ ರಾಷ್ಟçಧ್ವಜ ಹೊದಿಸುವ ಮೂಲಕ ಸೇನಾ ಗೌರವ ಸಲ್ಲಿಸಿದರು.
ಮುದ್ದೇಬಿಹಾಳ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಸಿಪಿಐ ಮೆಹಮ್ಮೂದ್ ಫಸಿಯುದ್ದೀನ್, ಮುದ್ದೇಬಿಹಾಳ ಪಿಎಸೈ ಸಂಜಯ್ ತಿಪ್ಪರಡ್ಡಿ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ನಾನಪ್ಪ ನಾಯಕ, ಮಾಜಿ ಸೈನಿಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಆರ್.ಐ.ಹಿರೇಮಠ, ಅರೆಸೇನಾ ಪಡೆಯ ಕ್ಷೇಮಾಭಿವೃಧ್ದಿ ಸಂಘದ ಅಧ್ಯಕ್ಷ ಅಬ್ದುಲ್‌ಜಬ್ಬಾರ್ ಪಲ್ಟನ್ ಅವರು ಶವಪೆಟ್ಟಿಗೆಯ ಮೇಲೆ ಹೂಗುಚ್ಚು ಇಟ್ಟು ಗೌರವ ನಮನ ಸಲ್ಲಿಸಿದರು.
ಸಂಸ್ಕಾರಕ್ಕೂ ಮುನ್ನ ರಾಷ್ಟçಧ್ವಜವನ್ನು ಮೃತ ಯೋಧನ ಸಹೋದರ ಮುರಳೀಧರ ಮತ್ತು ನಾಲ್ಕೂವರೆ ವರ್ಷದ ಪುತ್ರ ಆದರ್ಶನಿಗೆ ಸತ್ಯೇಂದ್ರಸಿಂಗ್ ಅವರು ಹಸ್ತಾಂತರಿಸಿದರು. ಕೆಲ ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಕಾಲು ಮುರಿದುಕೊಂಡು ನಡೆಯಲಾಗದ ನೋವಿನಲ್ಲಿದ್ದರೂ ಮಗನ ಶವ ಪೆಟ್ಟಿಗೆ ಎದುರು ಕುಳಿತು ರೋಧಿಸುತ್ತಿದ್ದ ಖೂಬಪ್ಪರಿಗೆ ಬಿಎಸ್‌ಎಫ್‌ನ ಸಂಪ್ರದಾಯದಂತೆ ಅಂತ್ಯಸಂಸ್ಕಾರದ ಖರ್ಚಿಗೆಂದು ೮೦೦೦ ರೂ ನಗದನ್ನು ನೀಡಿದರು.
ಮೌನೇಶರ ಪತ್ನಿ ಹುಲ್ಲೂರು ತಾಂಡಾದ ನಿರ್ಮಲಾಗೆ ಸಮಾಧಾನ ಪಡಿಸಿದ ಬಿಎಸ್‌ಎಫ್ ಅಧಿಕಾರಿಗಳು ಕೆಲವೇ ದಿನಗಳಲ್ಲಿ ಮೌನೇಶ ಸೇವೆ ಸಲ್ಲಿಸುತ್ತಿದ್ದ ಗುಜರಾತ್ ಬಟಾಲಿಯನ್‌ನ ಅಧಿಕಾರಿಗಳು ಬರಲಿದ್ದು ಮೌನೇಶನ ಉಳಿತಾಯದ ಹಣ ಸೇರಿ ಎಲ್ಲ ಸಾಮಗ್ರಿ ಮರಳಿಸುವುದಾಗಿ, ಅನುಕಂಪದ ನೌಕರಿ ದೊರಕಿಸಿಕೊಡುವ ಕುರಿತು ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದು ಭರವಸೆ ತುಂಬಿದರು.
ಸರ್ಕಾರಿ ಗೌರವಕ್ಕ ನಿರ್ಲಕ್ಷ್ ಮಾಡಲಾಗಿತ್ತೆ..?
ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ರಜೆಯ ಮೇಲಿದ್ದ ಯೋಧ ಮೌನೇಶನಿಗೆ ಸರ್ಕಾರಿ ಗೌರವ ಸಲ್ಲಿಸಲು ತಾಲೂಕಾಡಳಿತ, ಪೊಲೀಸ್ ಇಲಾಖೆ ನಿರ್ಲಕ್ಷ್ಯ ತೋರಿತ್ತು ಎನ್ನುವ ಮಾತು ಇಲ್ಲೆಲ್ಲ ಕೇಳಿಬರುತ್ತಿದೆ. ಆದರೆ ಬಿಎಸ್‌ಎಫ್ ಬಟಾಲಿಯನ್‌ನ ತಂಡ ಗೌರವ ವಂದನೆ ಸಹಿತ ಸೇನಾ ಗೌರವ ಸಲ್ಲಿಸಲು ಬರುತ್ತಿದೆ ಎನ್ನುವ ಮಾಹಿತಿ ತಿಳಿದ ಕೂಡಲೇ ಗುರುವಾರ ಅಂತ್ಯಕ್ರಿಯೆಯ ಸಂದರ್ಭ ತಾಂಡಾಕ್ಕೆ ತೆರಳಿ ತಾಲೂಕಾಡಳಿತ, ಪೊಲೀಸ್ ಇಲಾಖೆಯಿಂದ ಗೌರವ ಸಲ್ಲಿಸಲಾಯಿತು ಎಂದು ನಂಬಲರ್ಹ ಮೂಲಗಳು ತಿಳಿಸಿವೆ.