ನಿರಂಕುಶ ಅಧಿಕಾರ ನೆಲೆಗೊಳ್ಳುವ ಮುನ್ನವೇ ಸರಕಾರಗಳನ್ನು ಬದಲಿಸಬೇಕು. ಯಾಕೆ ?
ಮನುಷ್ಯ ತಾನೆಷ್ಟೇ ಜ್ಞಾನವಂತನಾಗಿದ್ದರೂˌ ಆತ ಕೆಲವು ಕಾಲದ ನಂತರ ಶೂನ್ಯನಾಗುತ್ತಾನೆ. ಮತ್ತೆ ಮೊದಲಿನಂತಾಗಬೇಕಾದರೆˌ ಕೆಲವು ಕಾಲ ತರಬೇತಿ ಅಥವಾ ಅಧ್ಯಯನ ಮಾಡಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಉದ್ಯೋಗಿಗಳಿಗೆ ತಮ್ಮ ಕಾರ್ಯ ಕ್ಷೇತ್ರದಲ್ಲಿ ನಿರಂತರತೆಯನ್ನು ಕಾಪಾಡಿಕೊಳ್ಳಲು ಆಗಾಗ ವಾಸ್ತವಾಂಶಗಳನ್ನು ಅರಿಯಲು ಪುನಶ್ಚೇತನ ತರಬೇತಿಯನ್ನು ನೀಡಲಾಗುತ್ತದೆ. ಅಲ್ಲದೆ ಅಧಿಕಾರವೆಂಬ ಮರದ ಬೇರುಗಳು ಆಳಕ್ಕಿಳಿಯದಿರಲಿ ಎಂದು. ಕಾರಣ, ಬೇರು ಆಳಕ್ಕಿಳಿದ ಮರ ಎತ್ತರಕ್ಕೆ ಬೆಳೆಯುತ್ತದೆ ಎತ್ತರಕ್ಕೆ ಬೆಳೆದ ಮರದ ನೆರಳು ಬಲು ಸಣ್ಣದಾಗಿರುತ್ತದೆ. ಅದು ಕೇವಲ ಕೆಲವರಿಗೆ ಮಾತ್ರ ನೆರಳು ನೀಡುತ್ತದೆ. ಅಲ್ಲದೆ ಮರವು ಸದಾ ಮೇಲ್ಮುಖವಾಗಿರುವುದರಿಂದ ತನ್ನ ಕೆಳಗಿನವರನ್ನು ನಿರ್ಕ್ಷಿಸುತ್ತದೆ. ಆದರೆ ಎತ್ತರಕ್ಕೆ ಬೆಳೆದ ಮರ ಬಲವಾದ ಗಾಳಿಗೆ ಮುರಿದು ಬೀಳುವ ಸಂಭವ ಹೆಚ್ಚಿರುತ್ತದೆ ಎಂಬುದನ್ನು ಅದು ಮರೆತಿರುತ್ತದೆ. ಆ ಮರೆವೇ ವಿನಾಶಕ್ಕೆ ಕಾರಣವಾಗಿರುತ್ತದೆ.
ಇದು ನಿಸರ್ಗದ ಸಹಜ ಗುಣವೂ ಹೌದು. ಹಾಗಾಗಿ ಗಿಡ ಎತ್ತರಕ್ಕೆ ಬೆಳೆಯುವುದಕ್ಕಿಂತ ವಿಶಾಲವಾಗಿ ಬೆಳೆದರೆˌ ಬೇರುಗಳೂ ತೀರ ಆಳಕ್ಕಿಳಿಯದೆ ಭೂಮಿಯ ಮೇಲ್ಪದರಿನ ಸ್ಥಿತಿಯನ್ನರಿತು ಹೆಚ್ಚು ಜನರಿಗೆ ನೆರಳನ್ನು ನೀಡುತ್ತದೆ.
ಇದು ಕೇವಲ ಮರದ ಸ್ಥಿತಿಯಲ್ಲˌ ˌ ಮಾನವನ ಬದುಕಿನ ವಾಸ್ತವವೂ ಹೌದು. ಯಾವುದೇ ಜೀವಿ ಬಹಳ ದಿನಗಳ ಕಾಲ ಒಂದೇ ಪ್ರದೇಶದಲ್ಲಿ ಜೀವಿಸಿದರೆ ಅಲ್ಲಿನ ತನ್ನ ಒಡನಾಟ ಹೆಚ್ಚಿಸಿಕೊಳ್ಳುತ್ತಾ ಜನರ ದೌರ್ಬಲ್ಯಗಳೊಂದಿಗೆ ಆಟವಾಡುತ್ತಾ ಅಧಿಕಾರದ ದರ್ಪವನ್ನು ರೂಢಿಸಿಕೊಂಡು ನಾನೇ ಎಲ್ಲˌˌ. ನಾನಿದ್ದರೆ ಎಲ್ಲಾˌ. ನಾನಿಲ್ಲದಿರೆ ಏನೂ ಇಲ್ಲ. ಎಂಬ ದುರಹಂಕಾರವನ್ನು ಬೆಳೆಸಿಕೊಂಡು ಸಾಮಾನ್ಯರ ಶೋಷಣೆಗೆ ಮುಂದಾಗುತ್ತದೆ. ಅಲ್ಲದೆ ಕ್ರಮೇಣ ಕ್ರಿಯಾಶೀಲತೆ ಕಡಿಮೆಯಾಗಿ ನಿರಂಕುಶದ ದಬ್ಬಾಳಿಕೆಯ ಹಾದಿ ಹಿಡಿಯುತ್ತದೆ. ಇದರಿಂದ ರೋಸಿ ಹೋದ ಜನರು ನಿರಂಕುಶ ನಡೆಯ ವಿರುದ್ಧ ದಂಗೆ ಎದ್ದು ಅಹಂಕಾರಕ್ಕೆ ಅಂತ್ಯ ಹಾಡುತ್ತಾರೆ.
ಜನರ ಒಳಿತಿಗಾಗಿ ಮತ್ತು ಸಾಮಾಜಿಕ ಹಿತದೃಷ್ಠಿಯಿಂದ ಯಾವುದೇ ವ್ಯಕ್ತಿಗೆ ಅಧಿಕಾರ ದೊರೆತಾಗ ತನ್ನ ಉದ್ದಾರಕ್ಕಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಬೆಂಬಲಿಸಿದವರಿಗೆ ಬೆನ್ನೆಲುಬಾಗಿ ನಿಂತು ಅವರ ಒಳಿತಿಗಾಗಿಯೇ ಶ್ರಮಿಸಬೇಕಾಗುತ್ತದೆ. ಮತ್ತು ಬೇರೆ ಬೇರೆ ಕ್ಷೇತ್ರಗಳ ಅನುಭವವನ್ನು ಪಡೆದು ಕಾರ್ಯ ನಿರ್ವಹಿಸಬೇಕಾಗುತ್ತದೆ. ಸರಕಾರಗಳೂ ನೌಕರರಿಂದ ತಮ್ಮ ವಿನೂತನ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರಲು ಹಾಗೂ ಪ್ರಾಮಾಣಿಕ ಸೇವೆ ಪಡೆಯಲು ತಮ್ಮ ನೌಕರರನ್ನು ಬಹಳ ವರ್ಷಗಳ ಕಾಲ ಒಂದೆ ಸ್ಠಳದಲ್ಲಿ ಕಾರ್ಯ ನಿರ್ವಹಿಸಲು ಬಿಡದೆ 3 ರಿಂದ 5 ವರ್ಷಗಳಿಗೊಮ್ಮೆ ಬೇರೆ ಸ್ಥಳಗಳಿಗೆ ವರ್ಗ ಮಾಡುವ ಕಾನೂನನ್ನು ಜಾರಿಗೆ ತಂದಿವೆ. ಹೀಗೆ ಮಾಡದಿದ್ದರೆ ನೌಕರರು ಕಾರ್ಯದಲ್ಲಿ ಶ್ರದ್ದೆಯನ್ನು ಕಳೆದುಕೊಂಡು ನಿರಂಕುಶ ಮನೋಭಾವ ಬೆಳೆಸಿಕೊತ್ತಾರೆ ಎಂಬ ದೂರದೃಷ್ಠಿ ಸರಕಾರಕ್ಕಿದೆ.
ಆದರಂತೆ ಜನರೂ 5 ವರ್ಷಗಳ ಒಂದು ಅಥವಾ ಎರಡು ಅವಧಿಗೆ ಮಾತ್ರ ಒಂದು ಪಕ್ಷದ ಸರ್ಕಾರವನ್ನು ಚುನಾಯಿಸಬೇಕು. ನಿರಂತರವಾಗಿ ಅದೇ ರಾಜಕಾರಣಿ ಅಥವಾ ಅದೆ ಸರ್ಕಾರವನ್ನು ಚುನಾಯಿಸಿದರೆˌ ಆ ರಾಜಕಾರಣಿ ಅಥವಾ ಸರಕಾರಗಳು ಅಧಿಕಾರ ಎಂಬ ಫಲವತ್ತಾದ ಭೂಮಿಯಲ್ಲಿ ಆಳವಾಗಿ ಬೇರೂರಿ ಜಾಡ್ಯತೆ ಜಾರುತ್ತದೆ. ಭ್ರಷ್ಟಾಚಾರˌ ಮೋಸˌ ಕೊಲೆˌ ದರೋಡೆˌ ಹಿಂಸೆ ಮತ್ತು ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಜನರನ್ನು ವಂಚಿಸಲಾರಂಭಿಸುತ್ತವೆ. ಆಡಳಿತದ ಸೂಕ್ಷ್ನಗಳನ್ನು ಅರಿತ ಸರಕಾರ! ಜನರ ಹಿತಕ್ಕಿಂತ ತಮ್ಮ ಅಸ್ಥಿತ್ವವೇ ಮುಖ್ಯವೆಂದು ಭಾವಿಸಿ ಜನರನ್ನು ವಂಚಿಸಲಾರಂಭಿಸುತ್ತವೆ. ಅವರಲ್ಲಿರುವ ಜನಪರ ಕಾಳಜಿ ಮತ್ತು ಸೃಜನಶೀಲತೆ ಕಡಿಮೆಯಾಗುವ ಅಂಶವೂ ಕಾರಣವಾಗಿರುತ್ತದೆ. ಏನು ಮಾಡಬೇಕೆಂದು ತೋಚದೆ ನಿರ್ಲಿಪ್ತರಾಗಿ ಜಾಡ್ಯತೆಗೆ ಜಾರುತ್ತಾರೆ. ಅಧಿಕಾರದ ಮದದಲ್ಲಿ ಮೆರೆಯುತ್ತಾರೆ.
ಜನರ ಜೀವನೋದ್ದಾರವಾಗಬೇಕಾದರೆˌ 5 ಅಥವಾ 10 ವರ್ಷಕ್ಕೊಮ್ಮೆ ಸರಕಾರಗಳು ಬದಲಾಗುತ್ತಲೇ ಇರಬೇಕು. ಆಗ ಮಾತ್ರ ಪ್ರತಿಯೊಬ್ಬ ರಾಜಕಾರಣಿ ಮತ್ತು ಸರಕಾರಗಳು ಹೊಸದಾದ ಜನಪರ ಆಲೋಚನೆಗಳೊಂದಿಗೆ ಚುನಾವಣೆಯನ್ನು ಎದುರಿಸಿˌ ಗೆದ್ದು ಜನರ ಕಲ್ಯಾಣದ ಕಡೆಗೆ ಗಮನ ಹರಿಸುತ್ತವೆ. ಇಲ್ಲದಿದ್ದರೆ ಬಲಿತ ಕುರಿಗಳಾಗಿ ಮದದಿಂದ ಮೆರೆಯಲು ಆರಂಭಿಸುತ್ತವೆ. ನಿರಂಕುಶ ಪ್ರಭುಗಳಾಗಿ ಜನಕಲ್ಯಾಣಕ್ಕೆ ಮೊಳೆ ಹೊಡೆದು ಮನ ಮತ್ತು ಮನೆಯ ಕಲ್ಯಾಣಕ್ಕೆ ಮನಸ್ಸು ಮಾಡುತ್ತವೆ.
















