ಡೀಸೆಲ್ ಕೊರತೆ; ಗ್ರಾಮೀಣ ಬಸ್ ಸಂಚಾರಕ್ಕೆ ಬ್ರೇಕ್!
ಇಂಡಿ ಕೆಎಸ್ಆರ್ಟಿಸಿ ಡಿಪೋದಲ್ಲಿ ಇಂಧನ ಸಮಸ್ಯೆ — ಶಿರಗೂರ, ದಸೂರ, ಅಗರಖೇಡ, ದೇವರಹಿಪ್ಪರಗಿ ಭಾಗದ ಪ್ರಯಾಣಿಕರಿಗೆ ಸಂಕಷ್ಟ
ಇಂಡಿ: ಸ್ಥಳೀಯ ಕೆಎಸ್ಆರ್ಟಿಸಿ ಡಿಪೋದಲ್ಲಿ ಉದ್ಭವಿಸಿರುವ ತೀವ್ರ ಡೀಸೆಲ್ ಸಮಸ್ಯೆಯಿಂದಾಗಿ ಗ್ರಾಮೀಣ ಭಾಗದ ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಕಂಗೆಟ್ಟಿದೆ. ಡಿಪೋದಲ್ಲಿ ಇಂಧನದ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ಡಿಪೋ ಮ್ಯಾನೇಜರ್ ಅವರು ಹಲವು ಪ್ರಮುಖ ಗ್ರಾಮೀಣ ಮಾರ್ಗಗಳ ಟ್ರಿಪ್ಗಳ ಸಂಖ್ಯೆಯನ್ನು ದಿಢೀರನೆ ಕಡಿತಗೊಳಿಸಿದ್ದಾರೆ. ಇದರಿಂದಾಗಿ ದಿನನಿತ್ಯದ ಕೆಲಸ ಕಾರ್ಯಗಳಿಗೆ ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವ ನೂರಾರು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಗ್ರಾಮಗಳಿಗೆ ತಪ್ಪಿದ ಬಸ್ ಸಂಪರ್ಕ: ತಾಲೂಕಿನ ಉಮರಾಣಿ, ದಸೂರ, ಅಗರಖೇಡ ಹಾಗೂ ದೇವರ ಹಿಪ್ಪರಗಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳಿಗೆ ಓಡಾಡುತ್ತಿದ್ದ ಬಸ್ಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತ ಮಾಡಲಾಗಿದೆ. ನಿಗದಿತ ಸಮಯಕ್ಕೆ ಬಸ್ಗಳು ಬಾರದ ಕಾರಣ ಈ ಭಾಗದ ಗ್ರಾಮಸ್ಥರು ಗಂಟೆಗಟ್ಟಲೆ ಬಸ್ ನಿಲ್ದಾಣಗಳಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸೌಲಭ್ಯವಿದ್ದರೂ, ಬಸ್ಗಳೇ ಇಲ್ಲದ ಕಾರಣ ಮಹಿಳೆಯರು ಹಣ ನೀಡಿ ಖಾಸಗಿ ವಾಹನಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ವಿದ್ಯಾರ್ಥಿಗಳಿಗೆ ತೀವ್ರ ಸಂಕಷ್ಟ:ಬಸ್ಗಳ ಟ್ರಿಪ್ ಕಡಿತದಿಂದಾಗಿ ಗ್ರಾಮೀಣ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭಾರಿ ಹೊಡೆತ ಬಿದ್ದಿದೆ. ಬೆಳಗ್ಗೆ ಮತ್ತು ಸಂಜೆ ಸೂಕ್ತ ಸಮಯಕ್ಕೆ ಬಸ್ಗಳು ಸಿಗದೆ ವಿದ್ಯಾರ್ಥಿಗಳು ತರಗತಿಗಳಿಗೆ ಗೈರಾಗುತ್ತಿದ್ದಾರೆ. ಡಿಪೋ ಅಧಿಕಾರಿಗಳ ಈ ನಿರ್ಧಾರದ ವಿರುದ್ಧ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಸಾರ್ವಜನಿಕರ ಆಗ್ರಹ:ಇಂಧನ ಸಮಸ್ಯೆಯ ನೆಪ ಒಡ್ಡಿ ಗ್ರಾಮೀಣ ಭಾಗದ ಬಸ್ ಸಂಚಾರವನ್ನು ಸ್ಥಗಿತಗೊಳಿಸಿರುವುದು ಸರಿಯಲ್ಲ. ಡಿಪೋ ಮ್ಯಾನೇಜರ್ ಅವರು ತಕ್ಷಣವೇ ಪರ್ಯಾಯ ವ್ಯವಸ್ಥೆ ಕೈಗೊಂಡು, ಕಡಿತಗೊಳಿಸಲಾದ ಎಲ್ಲ ಮಾರ್ಗಗಳ ಎಲ್ಲಾ ಟ್ರಿಪ್ಗಳನ್ನು ಮರುಸ್ಥಾಪಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಡಿಪೋ ಎದುರು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜನಾಕ್ರೋಶ ವ್ಯಕ್ತವಾಗಿದೆ.
ಹಲವೆಡೆ ರಸ್ತೆ ಸರಿ ಇಲ್ಲದ ಕಾರಣ ಬಸ್ ಓಡಿಸುವುದನ್ನು ಕಡಿತಗೊಳಿಸಲಾಗಿದೆ. ಅಗರಖೇಡ ರಸ್ತೆ ಸಂಪೂರ್ಣ ಹಾಳಾಗಿದ್ದು ಎರಡು ದಿನದಲ್ಲಿ ನಾಲ್ಕು ಟೈರ್ ಒಡೆದು ಹೋಗಿವೆ. ಹೀಗಾಗಿ ಆ ಬಾಗದಲ್ಲಿನ ಬಸ್ಗಳ ಟ್ರಿಪ್ಗಳನ್ನು ಕಡಿಮೆ ಮಾಡಲಾಗಿದೆ. ಡಿಸೆಲ್ ಸಮಸ್ಯೆ ಎದುರಾಗಿದ್ದು ಎರಡು ದಿನದಲ್ಲಿ ಸಮಸ್ಯೆ ಪರಿಹರಿಯಲಿದೆ.
ಅಮೀನಪ್ಪ ಭೋವಿ, ಡಿಪೋ ಮ್ಯಾನೇಜರ್ ಇಂಡಿ,
ತಾಂತ್ರಿಕ ದೋಷದ ನೆಪವೊಡ್ಡಿ ಬಸ್ ಓಡಿಸದೆ ಗ್ರಾಮೀಣ ಭಾಗದ ಜನರಿಗೆ ತೊಂದರೆ ಮಾಡಲಾಗುತ್ತಿದೆ. ಬಸ್ ಡಿಪೋಗಳಲ್ಲಿ ಡಿಸೆಲ್ ಶೇಖರಣೆ ಮಾಡಿಕೊಳ್ಳಲು ಸಹ ಆಗುತ್ತಿಲ್ಲ. ಈ ಸರಕಾರ ಗ್ರಾಮೀಣ ಭಾಗದ ಜನರ ಜೀವನದ ಜೊತೆಗೆ ಚಲ್ಲಾಟವಾಡುತ್ತಿದೆ.
ಶಂಕರಗೌಡ ಪಾಟೀಲ ಡೋಮನಾಳ ಬಿಜೆಪಿ ಮುಖಂಡರು