ಇಂಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಾಣಂತಿ ಸಾವು? ನಿರ್ಲಕ್ಷ್ಯದ ಆರೋಪಕ್ಕೆ ತೀವ್ರ ಆಕ್ರೋಶ
ಇಂಡಿ: ತಾಳಿಕೋಟೆ ತಾಲೂಕಿನ ಸಾಸನೂರ ಗ್ರಾಮದ ಸಂಗಮ್ಮ ಶಿವಾನಂದ ವಡಗೇರಿ ಎಂಬ ಬಾಣಂತಿ ಮಹಿಳೆ ಚಿಕಿತ್ಸೆಗಾಗಿ ಇಂಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದು, ನಂತರ ವಿಜಯಪುರಕ್ಕೆ ಕರೆದೊಯ್ಯುವ ವೇಳೆ ಅಂಬುಲೆನ್ಸ್ನಲ್ಲೇ ಮೃತಪಟ್ಟಿರುವ ಘಟನೆ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕುಟುಂಬದವರ ಆರೋಪದ ಪ್ರಕಾರ, ಹೆರಿಗೆ ಪ್ರಕ್ರಿಯೆ ನಡೆಸಲು ಆಸ್ಪತ್ರೆಯ ಸಿಬ್ಬಂದಿ ಇಂಜೆಕ್ಷನ್ ನೀಡಿದ ಬಳಿಕ ಮಹಿಳೆ ತೀವ್ರ ನೋವಿನಿಂದ ನರಳಾಡುತ್ತಿದ್ದಳು. ಸೂಕ್ತ ವೈದ್ಯಕೀಯ ಚಿಕಿತ್ಸೆ ಹಾಗೂ ತುರ್ತು ಆರೈಕೆ ಒದಗಿಸುವಲ್ಲಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸಂಬAಧಿಕರು ದೂರಿದ್ದಾರೆ.
ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗುತ್ತಿದ್ದAತೆ ವಿಜಯಪುರದ ಆಸ್ಪತ್ರೆಗೆ ರವಾನಿಸುವ ನಿರ್ಧಾರ ಕೈಗೊಳ್ಳಲಾಯಿತು. ಆದರೆ ವಿಜಯಪುರಕ್ಕೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಅಂಬುಲೆನ್ಸ್ನಲ್ಲಿ ಮಹಿಳೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಮಗು ಕೂಡ ಬದುಕುಳಿಯದೆ ಸಾವನ್ನಪ್ಪಿರುವ ಕುರಿತು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಘಟನೆ ತಿಳಿಯುತ್ತಿದ್ದಂತೆ ಮೃತೆಯ ಸಂಬAಧಿಕರು ಹಾಗೂ ಗ್ರಾಮಸ್ಥರು ಆಸ್ಪತ್ರೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ವೈದ್ಯರು, ಸಿಬ್ಬಂದಿ ಹಾಗೂ ತುರ್ತು ಚಿಕಿತ್ಸಾ ವ್ಯವಸ್ಥೆ ಇದ್ದಿದ್ದರೆ ಅಮೂಲ್ಯ ಜೀವ ಉಳಿಯಬಹುದಾಗಿತ್ತು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಯಲ್ಲಿ ನಡೆದ ಚಿಕಿತ್ಸೆ, ಹೆರಿಗೆ ಸಂದರ್ಭದ ವೈದ್ಯಕೀಯ ಕ್ರಮಗಳು ಹಾಗೂ ವಿಜಯಪುರಕ್ಕೆ ರವಾನಿಸುವ ನಿರ್ಧಾರದ ಕುರಿತು ಸಮಗ್ರ ತನಿಖೆ ನಡೆಸಬೇಕು. ಸಂಬAಧಿಸಿದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯ ಪಾತ್ರವನ್ನು ಪರಿಶೀಲಿಸಿ, ನಿರ್ಲಕ್ಷ್ಯ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕುಟುಂಬಸ್ಥರ ಆರೋಪ
“ಆಸ್ಪತ್ರೆಯಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಮಹಿಳೆ ನೋವಿನಿಂದ ಒದ್ದಾಡುತ್ತಿದ್ದರೂ ಸೂಕ್ತ ಗಮನ ಹರಿಸಲಿಲ್ಲ. ವಿಜಯಪುರಕ್ಕೆ ಕರೆದೊಯ್ಯುವ ವೇಳೆಗೆ ತಡವಾಗಿತ್ತು. ಇದರ ಪರಿಣಾಮವಾಗಿ ತಾಯಿ ಮತ್ತು ಮಗು ಇಬ್ಬರನ್ನೂ ಕಳೆದುಕೊಳ್ಳಬೇಕಾಯಿತು” ಶಿವಾನಂದ ವಡಗೇರಿ ಮೃತ ಬಾಣಂತಿಯ ಪತಿ.
ತನಿಖೆಗೆ ಒತ್ತಾಯ
ಘಟನೆಯ ಕುರಿತು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ, ಸತ್ಯಾಂಶವನ್ನು ಬಹಿರಂಗಪಡಿಸಬೇಕು. ಬಡ ಜನರು ಅವಲಂಬಿಸಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ತಾಯಿ-ಮಗು ಸಾವಿನ ಘಟನೆ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಆರೋಗ್ಯ ಇಲಾಖೆ ತನಿಖೆಯ ಬಳಿಕವೇ ಘಟನೆಯ ನಿಖರ ಕಾರಣ ಬೆಳಕಿಗೆ ಬರಬೇಕಿದೆ.
ನಮ್ಮಲ್ಲಿ ಸೆ. ೨೨ ರಂದು ೧೧ ಘಂಟೆಗೆ ಮಹಿಳೆ ಬಾಣಂತನಕ್ಕೆ ದಾಖಲಾಗಿದ್ದಾರೆ. ಮಹಿಳಾ ವೈದ್ಯರು ಚೆಕ್ ಮಾಡಿ ಮುಂದಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲು ತಿಳಿಸಿದ್ದಾರೆ. ಮದ್ಯಾಹ್ನ ೧ ಗಂಟೆಯ ನಂತರ ಅಂಬುಲೆನ್ಸ ಮುಖಾಂತರ ವಿಜಯಪುರಕ್ಕೆ ಕಳುಹಿಸಲಾಗಿದೆ.
ಡಾ. ಆರ್.ಎಸ್. ಇಂಗಳೆ ಮುಖ್ಯ ವೈದ್ಯಾಧಿಕಾರಿ ಹಾಗೂ ತಾಲೂಕು ವೈದ್ಯಾಧಿಕಾರಿ ಇಂಡಿ,
ಇಂಡಿ: ನಗರದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ಹೊರನೋಟ.




















