ಹೊರ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’
ಹೊರ್ತಿ: ಹೊರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೆ. 26ರಂದು ‘ಪ್ರಜಾ ಸೇವೆ ಆಂದೋಲನ’ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕರ ಕುಂದುಕೊರತೆ ಹಾಗೂ ವಿವಿಧ ಸಮಸ್ಯೆಗಳ ಅರ್ಜಿಗಳನ್ನು ಸ್ಥಳದಲ್ಲೇ ಪರಿಶೀಲಿಸಿ, ಸಾಧ್ಯವಾದಷ್ಟು ಇತ್ಯರ್ಥಪಡಿಸಲಾಗುವುದು ಎಂದು ಇಂಡಿ ತಾಲೂಕು ಪಂಚಾಯಿತಿಯ ಗ್ರಾಮೀಣ ಉದ್ಯೋಗ ನೋಡಲ್ ಅಧಿಕಾರಿ ಸಂಜಯ ಖಡಗೆಕರ ಹೇಳಿದರು.
ಹೊರ್ತಿ ಗ್ರಾಮ ಪಂಚಾಯಿತಿ ಕಚೇರಿಯ ಅಬ್ದುಲ್ ನಜಿರಸಾಬ್ ಸಭಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸಲ್ಲಿಸಿ, ಸ್ಥಳದಲ್ಲೇ ಪರಿಹಾರ ಪಡೆದುಕೊಳ್ಳಲು ‘ಪ್ರಜಾ ಸೇವೆ ಆಂದೋಲನ’ ಉತ್ತಮ ಅವಕಾಶವಾಗಿದೆ. ಆದ್ದರಿಂದ ಹೊರ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಹೊರ್ತಿ ಗ್ರಾಮ ಪಂಚಾಯಿತಿ ಪಿಡಿಒ ಮಲ್ಲಿಕಾರ್ಜುನ ನಿಲಂಗಿ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಮುಂಚಿತವಾಗಿ ಸಲ್ಲಿಸಿ, ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಬಳ್ಳೊಳ್ಳಿ ನಾಡ ಕಚೇರಿಯ ಕಂದಾಯ ಅಧಿಕಾರಿ ಪಿ.ಜೆ. ಕೊಡಹೊನ್ನ, ಗ್ರಾಮ ಆಡಳಿತಾಧಿಕಾರಿ ಯಲ್ಲಪ್ಪ ಪೂಜಾರಿ, ನಿವೃತ್ತ ಶಿಕ್ಷಕ ಬಿ.ಬಿ. ಗಡ್ಡದ, ಹೊರ್ತಿ ಪೊಲೀಸ್ ಠಾಣೆಯ ಪಿಎಸ್ಐ ಅನಿತಾ ರಾಠೋಡ, ತಾಲೂಕು ಗ್ಯಾರಂಟಿ ಯೋಜನೆಯ ಸದಸ್ಯ ಮಲ್ಲೇಶಿ ಭೋಸಗಿ, ಗಂಗಯ್ಯ ಹಿರೇಮಠ, ಪವನ ಕುಲಕರ್ಣಿ, ವಿಠ್ಠಲ ಬಬಲಾದ ಸೇರಿದಂತೆ ಸ್ಥಳೀಯ ಕೆಪಿಟಿಸಿಎಲ್ ಅಧಿಕಾರಿಗಳು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.
ಫೋಟೋ: ಹೊರ್ತಿ ಗ್ರಾಮ ಪಂಚಾಯಿತಿ ಕಚೇರಿಯ ಅಬ್ದುಲ್ ನಜಿರಸಾಬ್ ಸಭಾ ಭವನದಲ್ಲಿ ‘ಪ್ರಜಾ ಸೇವೆ ಆಂದೋಲನ’ದ ಪೂರ್ವಭಾವಿ ಸಭೆಯಲ್ಲಿ ಇಂಡಿ ತಾ.ಪಂ. ಗ್ರಾಮೀಣ ಉದ್ಯೋಗ ನೋಡಲ್ ಅಧಿಕಾರಿ ಸಂಜಯ ಖಡಗೆಕರ ಮಾತನಾಡಿದರು.



















